ಹೊಸದಿಲ್ಲಿ: ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಕುಸ್ತಿಪಟುಗಳ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಎನ್ನುವ ವರದಿಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. ತಾನು ನಿಯೋಜನೆ ಆಗಿರುವ ರೈಲ್ವೇ ಇಲಾಖೆಯ ಉದ್ಯೋಗಕ್ಕೆ ವಾಪಸ್ ಸೇರಿರುವುದು ಹೌದು. ಆದರೆ ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾನಿರತ ಕುಸ್ತಿಪಟುಗಳ ನಿಯೋಗವು ಶನಿವಾರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ಸಾಕ್ಷಿ ಮಲಿಕ್ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿತ್ತು.
“ಈ ಸುದ್ದಿ ಸಂಪೂರ್ಣ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ ನಾವೇನೂ ಹಿಂದೆ ಸರಿದಿಲ್ಲ, ನಾವು ಹಿಂದೆ ಸರಿಯುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿ ಹಬ್ಬಿಸಬೇಡಿ.” ಎಂದು ಸಾಕ್ಷಿ ಟ್ವೀಟ್ ಮಾಡಿದ್ದಾರೆ
ದೆಹಲಿಯ ಅಮಿತ್ ಶಾ ಅವರ ನಿವಾಸದಲ್ಲಿ ಶನಿವಾರ ತಡರಾತ್ರಿ ಆರಂಭವಾದ ಸಭೆಯು ರಾತ್ರಿಯವರೆಗೂ ನಡೆದಿದ್ದು, ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಶನಿವಾರ ನಡೆದ ಕುಸ್ತಿಪಟುಗಳ ಸಭೆಯ ಫಲಿತಂಶ ಅನಿರ್ದಿಷ್ಟವಾಗಿದೆ ಎಂದು ಸಾಕ್ಷಿ ಮಲಿಕ್ ಅವರ ಪತಿ ಸತ್ಯವ್ರತ್ ಕಡಿಯಾನ್ ಹೇಳಿದ್ದಾರೆ. ನಮಗೆ ನಾವು ಬಯಸಿದ ಪ್ರತಿಕ್ರಿಯೆ ಅಮಿತ್ ಶಾ ಅವರಿಂದ ಬಂದಿಲ್ಲ ಎಂದು ಕಡಿಯಾನ್ ಹೇಳಿದ್ದಾರೆ.
ये खबर बिलकुल ग़लत है। इंसाफ़ की लड़ाई में ना हम में से कोई पीछे हटा है, ना हटेगा। सत्याग्रह के साथ साथ रेलवे में अपनी ज़िम्मेदारी को साथ निभा रही हूँ। इंसाफ़ मिलने तक हमारी लड़ाई जारी है। कृपया कोई ग़लत खबर ना चलाई जाए। pic.twitter.com/FWYhnqlinC
— Sakshee Malikkh (@SakshiMalik) June 5, 2023