ಹಾಸನದ ಜೆಡಿಎಸ್ ಟಿಕೆಟ್ ತಿಕ್ಕಾಟ ದಿನಕಳೆದಂತೆ ಕಗ್ಗಂಟಾಗಿ ಹೋಗುತ್ತಿದೆ. ಒಂದು ಕಡೆ ರೇವಣ್ಣ ತನ್ನ ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರೆ, ಕುಟುಂಬ ರಾಜಕಾರಣದ ಅಪವಾದಗಳಿಂದ ತಕ್ಕ ಮಟ್ಟಿಗಾದರೂ ಹೊರಬರಲು ಪ್ರಯತ್ನ ಪಡುತ್ತಿರುವ ಹೆಚ್‌ಡಿ ಕುಮಾರಸ್ವಾಮಿ ಹಾಸನದಿಂದ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.
ರಾಮನಗರದಿಂದ ಅನಿತಾ ಕುಮಾರಸ್ವಾಮಿಯನ್ನೂ ಹಿಂದಕ್ಕೆ ಕರೆಸಿಕೊಳ್ಳಲು ಯೋಚಿಸುತ್ತಿರುವ ಹೆಚ್‌ಡಿಕೆ ದೇವೇಗೌಡರ ಸೊಸೆಯಂದಿರೂ ಚುನಾವಣಾ ರಾಜಕಾರಣದಲ್ಲಿ ಇರುವುದನ್ನು ತಪ್ಪಿಸಲು ನೋಡುತ್ತಿದ್ದಾರೆ. ಆ ಮೂಲಕ ಕುಟುಂಬದ ಎಲ್ಲರೂ ಸಕ್ರಿಯ ರಾಜಕಾರಣದ ಭಾಗವಾಗದಂತೆ ತಡೆಯಲು ಮಾಜಿ ಸಿಎಂ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಈ ನಡುವೆ ರೇವಣ್ಣ ಹಾಸನದಿಂದ ಹೆಚ್‌ಡಿಕೆ ಸೂಚಿಸಿರುವ ಸ್ವರೂಪ್ ಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದು, ಹೆಚ್‌ಡಿಕೆಗೆ ಟಕ್ಕರ್ ಕೊಡಲು ಪ್ರಯತ್ನಿಸುತ್ತಿದ್ದಾರೆ. ಸ್ವರೂಪ್ ಬದಲು ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ ಹೆಸರು ಈಗ ಕ್ಷೇತ್ರದಿಂದ ಕೇಳಿ ಬರುತ್ತಿದ್ದು, ರಾಜೇಗೌಡ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ.
ರಾಜೂಗೌಡರಿಗೆ ರೇವಣ್ಣ ಅವರೇ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನಲಾಗಿದ್ದು, ರೇವಣ್ಣ ನಡೆಯಿಂದ ಹೆಚ್‌ಡಿಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಸನ ಟಿಕೆಟ್ ಗೊಂದಲದ ನಡುವೆ ಚರ್ಚೆಗಾಗಿ ಹೆಚ್.ಡಿ. ದೇವೆಗೌಡರನ್ನು ಭೇಟಿ ಮಾಡಿದ ಹೆಚ್.ಡಿ. ಕುಮಾರಸ್ವಾಮಿ ರಾಜೇಗೌಡರ ಹೆಸರು ಈ ಸಮಯದಲ್ಲಿ ಯಾಕೆ ತರುತ್ತಿದ್ದಾರೆ. ನಮ್ಮ ಪಕ್ಷದೊಳಗೆ ಎರಡು ಎರಡು ಬಣಗಳಾದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುತ್ತದೆ. ರೇವಣ್ಣ ಕರೆದು ಮನವರಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ್ಯಾಂತ ಪಕ್ಷ ಅಧಿಕಾರಕ್ಕೆ ತರಲು ಹೋರಾಟ ಮಾಡುತ್ತೀದ್ದೇವೆ. ಒಂದು ಕ್ಷೇತ್ರದ ಟಿಕೆಟ್ ಗೋಸ್ಕರ ಈ ರೀತಿ ಪಟ್ಟು ಹಿಡಿದರೆ ಪಲಿತಾಂಶದ ಮೇಲೆ ಹೊಡೆತ ಬೀಳುತ್ತೆ ಎಂಬ ಆತಂಕ ಜೆಡಿಎಸ್ ಕಾರ್ಯಕರ್ತರಲ್ಲೂ ಮೂಡಿದೆ.