ಬಿಹಾರ: ಪೊಲೀಸ್ ಠಾಣೆಯೊಂದರ ಸ್ಟ್ರಾಂಗ್ ರೂಂನಲ್ಲಿ ಕಳೆದ 29 ವರ್ಷಗಳಿಂದ ಬಂಧಿಯಾಗಿದ್ದ ಹನುಮ ಮೂರ್ತಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ದೀರ್ಘ ಕಾನೂನು ಹೋರಾಟದ ಬಳಿಕ ಬಿಹಾರದ ಕೋರ್ಟ್ ಈ ಮೂರ್ತಿಗಳ ಬಿಡುಗಡೆಗೆ ಆದೇಶಿಸಿದೆ.
ಈ ಪ್ರಕರಣದ ಹಿನ್ನೆಲೆ ತಿಳಿಯಬೇಕಾದರೆ 1994ರ ಮೇ 29ನೆ ತಾರೀಕಿನತ್ತ ಹಿಂದಿರುಗಿ ನೋಡಬೇಕು.
ಬಿಹಾರದ ಗುಂಡಿ ಗ್ರಾಮದ ಶ್ರೀರಂಗನಾಥ ದೇವಸ್ಥಾನದಿಂದ ಹನುಮಾನ್ ಮತ್ತು ಬಾರ್ಬರ್ ಸ್ವಾಮಿ ಮೂರ್ತಿಯನ್ನು ಆ ದಿನ ಕಳವುಗೈಯಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆನಂತರ ಬಾವಿಯೊಂದರಲ್ಲಿ ಈ ಎರಡು ಮೂರ್ತಿಗಳು ಪತ್ತೆಯಾಗಿದ್ದವು. ಆನಂತರ ಎರಡೂ ಮೂರ್ತಿಗಳನ್ನು ಪೊಲೀಸ್ ಠಾಣೆಯ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿತ್ತು.
ದೇವಸ್ಥಾನದ ಟ್ರಸ್ಟ್ ಗೆ ಈ ಮೂರ್ತಿಗಳನ್ನು ಮರಳಿಸಬೇಕೆಂದು ಪಾಟ್ನಾ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿತ್ತು.
ಇದೀಗ 29 ವರ್ಷಗಳ ನಂತರ ಕೋರ್ಟ್ ತೀರ್ಪು ನೀಡಿದ್ದು ಮೂರ್ತಿಗಳನ್ನು ಮರಳಿಸಬೇಕು ಎಂದಿದೆ. ಈ ಮೂಲಕ ದೀರ್ಘ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ.