Thursday, April 16, 2026
Homeಟಾಪ್ ನ್ಯೂಸ್NS BOSARAJU: ರಾಜ್ಯದಲ್ಲಿ ಅಂತರ್ಜಲ ಸುಧಾರಣೆ : ಬಿಗ್ ಅಪ್ಡೇಟ್ ಕೊಟ್ಟ ಸಚಿವ

NS BOSARAJU: ರಾಜ್ಯದಲ್ಲಿ ಅಂತರ್ಜಲ ಸುಧಾರಣೆ : ಬಿಗ್ ಅಪ್ಡೇಟ್ ಕೊಟ್ಟ ಸಚಿವ

ಬೆಂಗಳೂರು: ರಾಜ್ಯ ಸರ್ಕಾರದ ಜಲಸಂರಕ್ಷಣಾ ನೀತಿಗಳು ಹಾಗೂ ಕಳೆದ ಸಾಲಿನಲ್ಲಿ ಆದ ಉತ್ತಮ ಮಳೆಯ ಫಲವಾಗಿ ಕರ್ನಾಟಕದಲ್ಲಿ ಅಂತರ್ಜಲ (Ground Water) ಮಟ್ಟದಲ್ಲಿ ಆಶಾದಾಯಕ ಸುಧಾರಣೆ ಕಂಡುಬಂದಿದೆ. ರಾಜ್ಯದ ವಾರ್ಷಿಕ ಅಂತರ್ಜಲ ಮರುಪೂರಣ ಸಾಮರ್ಥ್ಯವು 19.28 ಬಿಲಿಯನ್ ಕ್ಯೂಬಿಕ್ ಮೀಟರ್ (BCM) ಗೆ ಏರಿಕೆಯಾಗಿದ್ದು, ಅಂತರ್ಜಲದ ಒಟ್ಟಾರೆ ಬಳಕೆಯಲ್ಲಿ ಇಳಿಕೆಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು (NS Bosaraju) ತಿಳಿಸಿದರು.

ವಿಕಾಸಸೌಧದಲ್ಲಿಂದು ‘2025ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ’ಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಳಕೆಯಲ್ಲಿ ಇಳಿಕೆ: ರಾಜ್ಯದ ಒಟ್ಟಾರೆ ಅಂತರ್ಜಲ ಬಳಕೆಯು 2024 ರಲ್ಲಿ ಶೇ. 68.44 ರಷ್ಟಿತ್ತು. ಆದರೆ, 2025 ರಲ್ಲಿ ಇದು ಶೇ. 66.49 ಕ್ಕೆ ಇಳಿಕೆಯಾಗಿದೆ. ಇದು ಸಾರ್ವಜನಿಕರಲ್ಲಿ ಮೂಡಿರುವ ಜಾಗೃತಿ ಹಾಗೂ ಜವಾಬ್ದಾರಿಯುತ ಬಳಕೆಯನ್ನು ಪ್ರತಿಬಿಂಬಿಸುತ್ತದೆ.

ಮರುಪೂರಣ ಸಾಮರ್ಥ್ಯ ವೃದ್ಧಿ: 2024 ರಲ್ಲಿ 18.74 BCM ಇದ್ದ ವಾರ್ಷಿಕ ಅಂತರ್ಜಲ ಮರುಪೂರಣ ಪ್ರಮಾಣವು 2025 ರಲ್ಲಿ 19.28 BCM ಗೆ ಏರಿಕೆಯಾಗಿದೆ. ಇದರಿಂದಾಗಿ ಲಭ್ಯವಿರುವ ಅಂತರ್ಜಲ ಸಂಪನ್ಮೂಲವೂ ಸಹ 17.41 BCM ಗೆ ಹೆಚ್ಚಳವಾಗಿದೆ.

ಜಲಸಂರಕ್ಷಣಾ ಕಾಮಗಾರಿಗಳ ಪಾತ್ರ: ಕೇವಲ ಒಂದು ವರ್ಷದಲ್ಲಿ ರಾಜ್ಯದಾದ್ಯಂತ ಜಲಸಂರಕ್ಷಣಾ ರಚನೆಗಳ ಸಂಖ್ಯೆ 3.15 ಲಕ್ಷದಿಂದ 3.94 ಲಕ್ಷಕ್ಕೆ ಏರಿಕೆಯಾಗಿದೆ. ಈ ಕಾಮಗಾರಿಗಳ ಮೂಲಕ ಮರುಪೂರಣವಾಗುವ ನೀರಿನ ಪ್ರಮಾಣದಲ್ಲಿ ಶೇ. 29.11 ರಷ್ಟು ಜಿಗಿತ ಕಂಡುಬಂದಿದೆ.

ಸರ್ಕಾರದ ದೂರದೃಷ್ಟಿಯ ಕೆರೆ ತುಂಬಿಸುವ ಯೋಜನೆಗಳಿಂದಾಗಿ ಹಲವು ತಾಲೂಕುಗಳ ಅಂತರ್ಜಲ ಸ್ಥಿತಿಗತಿ ಸುಧಾರಿಸಿದೆ. ವಿಶೇಷವಾಗಿ ಚಾಮರಾಜನಗರ ತಾಲೂಕು ‘ಅತಿ-ಬಳಕೆ’ ಪಟ್ಟಿಯಿಂದ ಹೊರಬಂದು ‘ನಿರ್ಣಾಯಕ’ ಹಂತ ತಲುಪಿದೆ. ಬೆಳಗಾವಿಯ ಅಥಣಿ, ಬೆಂಗಳೂರು ದಕ್ಷಿಣದ ಚನ್ನಪಟ್ಟಣ, ಚಿತ್ರದುರ್ಗದ ಮೊಳಕಾಲ್ಮೂರು, ಹಾವೇರಿಯ ರಾಣೆಬೆನ್ನೂರು, ಸವಣೂರು ಮತ್ತು ಶಿಗ್ಗಾಂವಿ ತಾಲೂಕುಗಳು ‘ಸುರಕ್ಷಿತ’ ವಲಯಕ್ಕೆ ಸೇರ್ಪಡೆಯಾಗಿವೆ.

ಜಲ ಜೀವನ್ ಮಿಷನ್ ಅಡಿಯಲ್ಲಿ ಮೇಲ್ಮೈ ನೀರಿನ ಪೂರೈಕೆ ಹೆಚ್ಚಾಗಿರುವುದರಿಂದ, ಗೃಹಬಳಕೆಗೆ ಅಂತರ್ಜಲದ ಅವಲಂಬನೆ ಶೇ. 0.58 ರಷ್ಟು ಕಡಿಮೆಯಾಗಿದೆ. ರೈತರಿಗೆ ವರ್ಷದ 365 ದಿನವೂ ನೀರಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೆರೆ ಪುನರುಜ್ಜೀವನ ಮತ್ತು ವೈಜ್ಞಾನಿಕ ಜಲ ನಿರ್ವಹಣೆಗೆ ಆದ್ಯತೆ ನೀಡುತ್ತಿದೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ ಹಾಗೂ ಕೇಂದ್ರ ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಕೋಮಾದಲ್ಲಿರುವ ಪತಿಯ ವೀರ್ಯ ಸಂರಕ್ಷಣೆಗೆ ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋದ ಪತ್ನಿ

ಹೆಚ್ಚಿನ ಸುದ್ದಿ

Change Language »
error: Content is protected !!