ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸ ವಲಸೆ ನೀತಿಯಡಿ 5 ಮಿಲಿಯನ್ ಡಾಲರ್ಗೆ “ಗೋಲ್ಡ್ ಕಾರ್ಡ್” ಯೋಜನೆಯನ್ನು ಪ್ರಕಟಿಸಿದ್ದರು. ಆದರೆ, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಗ್ರೀನ್ ಕಾರ್ಡ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅಮೆರಿಕದಲ್ಲಿ ಉಳಿದಿರುವ ವಿದೇಶಿಗರ ಆತಂಕ ಹೆಚ್ಚಿಸಿದೆ.
ಗ್ರೀನ್ ಕಾರ್ಡ್ ಪಡೆದರೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಬಹುದು ಎಂದು ಯಾರೂ ಭಾವಿಸಬಾರದೆಂದು ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ. ಅಮೆರಿಕದ ಭದ್ರತೆ ಮತ್ತು ಸಮುದಾಯದ ಹಿತದೃಷ್ಟಿಯಿಂದ ಯಾರನ್ನು ದೇಶದಲ್ಲಿ ಉಳಿಸಿಕೊಳ್ಳಬೇಕೆಂದು ನಿರ್ಧರಿಸುವ ಹಕ್ಕು ಸರ್ಕಾರಕ್ಕೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟ್ರಂಪ್ ಅವರು ‘ಗೋಲ್ಡ್ ಕಾರ್ಡ್’ ಯೋಜನೆಯ ಮೂಲಕ ವಿದೇಶಿಯರು ಅಮೆರಿಕದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಹೂಡಿಕೆ ಮಾಡಲು ಅವಕಾಶ ಪಡೆಯಬಹುದು ಎಂದು ತಿಳಿಸಿದ್ದರು. ಈ ಗೋಲ್ಡ್ ಕಾರ್ಡ್ ಯೋಜನೆಯು ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ಯೋಜನೆಯ ವಿಸ್ತೃತ ರೂಪ ಎಂದು ಟ್ರಂಪ್ ಹೇಳಿದ್ದರು.
ಟ್ರಂಪ್ ಅವರ ಗೋಲ್ಡ್ ಕಾರ್ಡ್ ಯೋಜನೆ ಮತ್ತು ವ್ಯಾನ್ಸ್ ಅವರ ಗ್ರೀನ್ ಕಾರ್ಡ್ ಕುರಿತ ಹೇಳಿಕೆಗಳು ಅಮೆರಿಕದ ವಲಸೆ ನೀತಿಯ ಬಗ್ಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಗ್ರೀನ್ ಕಾರ್ಡ್ ಮೇಲೆ ಅವಲಂಬಿತರಾಗಿರುವ ವಿದೇಶಿ ವಿದ್ಯಾರ್ಥಿಗಳ ಮೇಲೆ ಈ ನೀತಿಗಳು ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಕಾದು ನೋಡಬೇಕಿದೆ.