Wednesday, August 19, 2026
Homeಟಾಪ್ ನ್ಯೂಸ್RAIN: ಮಳೆ ಕೊರತೆ ಎಫೆಕ್ಟ್: ಸರ್ಕಾರಿ ಕಚೇರಿಗಳಲ್ಲಿ ನೀರು, ಕರೆಂಟ್ ಮಿತ ಬಳಕೆಗೆ ಸಿಎಸ್ ಖಡಕ್...

RAIN: ಮಳೆ ಕೊರತೆ ಎಫೆಕ್ಟ್: ಸರ್ಕಾರಿ ಕಚೇರಿಗಳಲ್ಲಿ ನೀರು, ಕರೆಂಟ್ ಮಿತ ಬಳಕೆಗೆ ಸಿಎಸ್ ಖಡಕ್ ಆದೇಶ!

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ನಿರಂತರ ಮಳೆ ಕೊರತೆಯ ಹಿನ್ನೆಲೆಯಲ್ಲಿ, ವಿಧಾನಸೌಧ ಸೇರಿದಂತೆ ಸರ್ಕಾರದ ಎಲ್ಲಾ ಸಚಿವಾಲಯಗಳ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ (Electricity) ಅನ್ನು ಅತ್ಯಂತ ಮಿತವಾಗಿ ಬಳಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು (Chief Secretary) ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಸೂಚನೆಯ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು (DPAR) ಈ ಕುರಿತು ಅಧಿಕೃತ ಆದೇಶ ಪ್ರಕಟಿಸಿದೆ. ಪ್ರಸ್ತುತ ಜಗತ್ತಿನಾದ್ಯಂತ ಸಂಭವಿಸುತ್ತಿರುವ ‘ಎಲ್‌ನೊ’ (El Nino) ಹವಾಮಾನ ವೈಪರೀತ್ಯವು ಸಾಮಾನ್ಯ ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡಿದೆ ಎಂದು ಆದೇಶದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಈ ಹವಾಮಾನ ಬದಲಾವಣೆಯಿಂದಾಗಿ ದೇಶದ ಹಲವೆಡೆ ಅತಿವೃಷ್ಟಿ, ಪ್ರವಾಹ ಹಾಗೂ ಬರಗಾಲದಂತಹ ತೀವ್ರ ಪರಿಸ್ಥಿತಿಗಳು ಎದುರಾಗುತ್ತಿವೆ. ಮಳೆ ಕೊರತೆಯು ನೇರವಾಗಿ ಕೃಷಿ ಉತ್ಪಾದನೆಯ ಮೇಲೆ ಭಾರಿ ಹೊಡೆತ ನೀಡುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮಲ್ಲಿ ಲಭ್ಯವಿರುವ ಅತ್ಯಮೂಲ್ಯ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವಜಲವಾಗಿರುವ ನೀರನ್ನು ಬಳಸುವಾಗ ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ವಿದ್ಯುತ್ ನವೀಕರಿಸಲಾಗದಂತಹ ಅತ್ಯಂತ ಮಹತ್ವದ ನೈಸರ್ಗಿಕ ಸಂಪನ್ಮೂಲವಾಗಿರುವುದರಿಂದ ವಿದ್ಯುತ್‌ನ್ನು ಸ್ವೇಚ್ಛಾ ಮನೋಭಾವದಿಂದ ಬಳಸುವುದು ಸರಿಯಾದ ಕ್ರಮವಾಗಿರುವುದಿಲ್ಲ. ಇಂತಹ ಅಮೂಲ್ಯವಾದ ವಿದ್ಯುತ್‌ನ್ನು ವ್ಯಯ ಮಾಡದೇ ಮಿತವಾಗಿ ಬಳಸುವುದು ಮತ್ತು ಅನಗತ್ಯ ಬಳಕೆಯನ್ನು ತಡೆಗಟ್ಟುವುದರ ಮೂಲಕ ವಿದ್ಯುತ್ ಉಳಿತಾಯ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಈ ಕೆಳಕಂಡ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.

ನೀರು, ವಿದ್ಯುತ್‌ ಮಿತ ಬಳಕೆಗೆ ಏನು ಮಾಡಬೇಕು?

  • ಸಚಿವಾಲಯದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನೈಸರ್ಗಿಕ ಬೆಳಕನ್ನು ಬಳಸಬೇಕು.
  • ಕಚೇರಿಗಳ ಕಿಟಕಿಗಳನ್ನು ಪೂರ್ತಿ ತೆರೆದಿಟ್ಟು, ಅಗತ್ಯವಿದ್ದಾಗ ಮಾತ್ರ ದೀಪ ಮತ್ತು ಫ್ಯಾನ್‌ಗಳನ್ನು ಆನ್ ಮಾಡಬೇಕು. ಸಚಿವರು ಮತ್ತು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ಸಮಯದಲ್ಲಿ ಹಾಗೂ ಕಚೇರಿ ವೇಳೆ ಮುಕ್ತಾಯವಾದ ನಂತರ ವಿದ್ಯುತ್ ಸಂಪರ್ಕದ ಎಲ್ಲಾ ಸ್ವಿಚ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು.
  • ಅಧಿಕಾರಿಗಳ ಕಚೇರಿಗಳಲ್ಲಿನ ಏರ್ ಕಂಡಿಷನರ್‌ಗಳನ್ನು (AC) ಕಡ್ಡಾಯವಾಗಿ 24-26°C ತಾಪಮಾನದಲ್ಲೇ ಬಳಸಬೇಕು. ಎಲ್‌ಇಡಿ (LED) ದೀಪಗಳನ್ನು ಅಳವಡಿಸುವುದು ಹಾಗೂ ಕಾರಿಡಾರ್‌ಗಳು, ವಿಶ್ರಾಂತಿ ಕೊಠಡಿಗಳು ಮತ್ತು ಸಭಾಂಗಣಗಳಲ್ಲಿ ಚಲನಶೀಲ ಸಂವೇದಕಗಳನ್ನು ಅಳವಡಿಸಲು ಸೂಚನೆ.
  • ಶೌಚಾಲಯ ಹಾಗೂ ಕಚೇರಿಗಳಲ್ಲಿ ನಲ್ಲಿಗಳನ್ನು (Taps) ಕಡ್ಡಾಯವಾಗಿ ಬಂದ್ ಮಾಡಬೇಕು. ನೀರಿನ ಹರಿವು ಕಡಿಮೆ ಮಾಡಲು ವಾಟರ್ ಏರೇಟರ್‌ಗಳನ್ನು (Water Aerators) ಅಳವಡಿಸಲಾಗುವುದು. ನಲ್ಲಿಗಳಲ್ಲಿ ಸೋರಿಕೆಯಿದ್ದರೆ ತಕ್ಷಣ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಬೇಕು.

ಈ ಆದೇಶಗಳನ್ನು ವಿಧಾನ ಸಭೆ, ವಿಧಾನ ಪರಿಷತ್ತಿನ ಸಚಿವಾಲಯದ ಎಲ್ಲಾ ಇಲಾಖೆಗಳು ಹಾಗೂ ಇತರ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆದೇಶದಲ್ಲಿ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!