ರಷ್ಯಾದ ಟಿವಿ ಚಾನೆಲ್ ಗಳು ಯುಟ್ಯೂಬ್ ನಲ್ಲಿ ಪುನಃ ಸ್ಥಾಪಿಸಲು ಹಿಂದೇಟು ಹಾಕಿದ್ದ ಗೂಗಲ್ ಗೆ ರಷ್ಯಾದ ನ್ಯಾಯಾಲಯವೊಂದು ದೊಡ್ಡ ದಂಡವನ್ನು ವಿಧಿಸಿದ್ದು, ದಂಡದ ಮೊತ್ತ ಕೇಳಿ ಒಂದು ಕ್ಷಣ ಎಲ್ಲರೂ ಕೂಡ ಶಾಕ್ ಗೆ ಒಳಗಾಗಿದ್ದಾರೆ.
2020ರಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಯುಎಸ್ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಅಲ್ಟ್ರಾ ನ್ಯಾಷನಲಿಸ್ಟ್ ರಷ್ಯಾದ ಚಾನೆಲ್ ತ್ಸಾರ್ಗ್ರಾಡ್ ಅನ್ನು ನಿಷೇಧಿಸಿತು. ಅಲ್ಲದೇ ಪುಟಿನ್ ರಕ್ಷಣಾ ಸಚಿವಾಲಯದ ಒಡೆತನದ ಜ್ವೆಜ್ಡಾ ಸೇರಿದಂತೆ ರಷ್ಯಾದ 17 ಮಾಧ್ಯಮ ಕೇಂದ್ರಗಳು ತಮ್ಮನ್ನು ನಿರ್ಬಂಧಿಸಿದನ್ನು ಪ್ರಶ್ನಿಸಿ ರಷ್ಯನ್ ಕೋರ್ಟ್ ಮೆಟ್ಟಿಲೇರಿದ್ದವು.
ಮಾಸ್ಕೋ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸುವಂತೆ ಗೂಗಲ್ಗೆ ನಿರ್ದೇಶಿಸಿತ್ತು. ಆದರೆ, 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದಾಗ ಸ್ಟುಟ್ನಿಕ್, ಆರ್ಟಿ ಇತ್ಯಾದಿ ಪ್ರಮುಖ ರಷ್ಯನ್ ಮೀಡಿಯಾ ಸೇರಿದಂತೆ ಹಲವು ಚಾನಲ್ಗಳನ್ನು ಯೂಟ್ಯೂಬ್ ನಿಷೇಧಿಸಿತು.
ಇದೀಗ ಈ ಬಗ್ಗೆ ವಿಚಾರಣೆ ನಡೆಸಿದ ರಷ್ಯಾದ ನ್ಯಾಯಾಲಯ ಗೂಗಲ್ ಗೆ ಬಿಸಿ ಮುಟ್ಟಿಸಿದೆ. ವರದಿಯ ಪ್ರಕಾರ, ಗೂಗಲ್ ಗೆ 1 ಲಕ್ಷ ರೂಬಲ್ಸ್ ನಷ್ಟು ದಂಡ ವಿಧಿಸಿತ್ತು. ಜೊತೆಗೆ ಯುಟ್ಯೂಬ್ ಮರು ಸ್ಥಾಪಿಸುವ ವರೆಗೆ ಪ್ರತಿ ವಾರ ದಂಡ ದ್ವಿಗುಣ ವಾಗುತ್ತದೆ ಎಂದು ಆದೇಶಿಸಿತ್ತು.
ಇತ್ತೀಚಿನ ವರದಿಗಳ ಪ್ರಕಾರ, ಗೂಗಲ್ ವಿರುದ್ಧ ದಂಡ ವಿಧಿಸಿ ನಾಲ್ಕು ವರ್ಷಗಳೇ ಕಳೆಯುತ್ತ ಬಂದಿದ್ದು, ಇಂದಿಗೆ ದಂಡದ ಮೊತ್ತ ಇಪ್ಪತ್ತು ಡೆಸಿಲಿಯನ್ ರುಬಲ್ಸ್ನಷ್ಟಗಿದ್ದು, ಇದನ್ನು ಪಾವತಿಸಲು ಗೂಗಲ್ ಗೆ ಹಲವಾರು ವರ್ಷಗಳೇ ಬೇಕಾಗುತ್ತದೆ.
ಹಾಗಾದರೆ ಡೆಸಿಲಿಯನ್ ಅಂದ್ರೆ ಎಷ್ಟು..?
ಒಂದು ಅಂಕಿ ಪಕ್ಕ 2 ಸೊನ್ನೆ ಹಾಕಿದರೆ ನೂರು ಆಗುತ್ತದೆ ಅದೇ ರೀತಿ 7 ಸೊನ್ನೆ ಹಾಕಿದರೆ ಒಂದು ಕೋಟಿ, ಟ್ರಿಲಿಯನ್ಗೆ 12 ಸೊನ್ನೆ ಬೇಕು. ಒಂದು ಡೆಸಿಲಿಯನ್ಗೆ 33 ಸೊನ್ನೆ ಬೇಕು. ಅದೇ ಇಪ್ಪತ್ತು ಡೆಸಿಲಿಯನ್ ರುಬಲ್ಸ್ ಆಗಬೇಕು ಅಂದರೆ ಅದೆಷ್ಟು ಸೊನ್ನೆ ಬೇಕೋ ನೀವೇ ಯೋಚನೆ ಮಾಡಿ..