ನವದೆಹಲಿ: ದೇಶದಲ್ಲಿ ಈರುಳ್ಳಿಯ (Good News) ದಾಸ್ತಾನು (ಬಫರ್ ಸ್ಟಾಕ್) ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸುವ ಹಾಗೂ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ (PSF) ಅಡಿಯಲ್ಲಿ ಈರುಳ್ಳಿ ಖರೀದಿ ದರವನ್ನು ಶೇಕಡಾ 13 ರಷ್ಟು ಹೆಚ್ಚಿಸಿದೆ. ಪ್ರಮುಖ ಈರುಳ್ಳಿ ಬೆಳೆಯುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ನಿಗದಿಪಡಿಸಲಾಗಿದ್ದ ಪ್ರತಿ ಕ್ವಿಂಟಾಲ್‌ಗೆ 1,875 ರೂಪಾಯಿ ಖರೀದಿ ದರವನ್ನು ಈಗ ಬರೋಬ್ಬರಿ 2,125 ರೂಪಾಯಿಗೆ ಏರಿಸುವ ಮೂಲಕ ಈರುಳ್ಳಿ ಬೆಳೆಗಾರರಿಗೆ ಸರ್ಕಾರ ದೊಡ್ಡ ಕೊಡುಗೆ ನೀಡಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 3ನೇ ಬಾರಿ ದರ ಪರಿಷ್ಕರಣೆ
ಮುಕ್ತ ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ದರವು ಪ್ರತಿ ಕ್ವಿಂಟಾಲ್‌ಗೆ 2,000 ದಿಂದ 2,100 ರೂಪಾಯಿ ಆಸುಪಾಸಿನಲ್ಲಿದೆ. ಆದರೆ, ಸರ್ಕಾರಿ ಏಜೆನ್ಸಿಗಳು ನೀಡುತ್ತಿದ್ದ ದರ ತೀರಾ ಕಡಿಮೆಯಾಗಿದ್ದರಿಂದ ರೈತರು ಸರ್ಕಾರಕ್ಕೆ ಈರುಳ್ಳಿ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರನೇ ಬಾರಿಗೆ ದರ ಪರಿಷ್ಕರಣೆ ಮಾಡಿದೆ. ಮೇ ತಿಂಗಳಲ್ಲಿ, ಪ್ರತಿ ಕೆಜಿಗೆ 12.70 ರೂಪಾಯಿ ಇತ್ತು. ಜೂನ್ 1 ರಂದು ಪ್ರತಿ ಕೆಜಿಗೆ 15.80 ರೂಪಾಯಿಗೆ ಏರಿಸಲಾಗಿತ್ತು. ಜೂನ್ 13 ರಂದು ಪ್ರತಿ ಕೆಜಿಗೆ 16.50 ರೂಪಾಯಿಗೆ ಹೆಚ್ಚಿಸಲಾಗಿತ್ತು. ಈಗ ಮಾರುಕಟ್ಟೆ ದರಕ್ಕೆ ಸಮನಾಗುವಂತೆ ಪ್ರತಿ ಕೆಜಿಗೆ 21.25 ರೂಪಾಯಿ (ಕ್ವಿಂಟಾಲ್‌ಗೆ 2,125 ರೂ.) ನಿಗದಿಪಡಿಸಲಾಗಿದೆ.
ಮಂದಗತಿಯಲ್ಲಿದ್ದ ಪ್ರಕ್ರಿಯೆಗೆ ವೇಗ ನೀಡಲು ಕ್ರಮ
ಸರ್ಕಾರದ ಪರವಾಗಿ ಈರುಳ್ಳಿ ಖರೀದಿಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (NCCF) ಸಂಸ್ಥೆಗಳು ಜೂನ್ 1 ರಿಂದ ಕೇವಲ 2,000 ಟನ್ ಈರುಳ್ಳಿಯನ್ನಷ್ಟೇ ಖರೀದಿಸಲು ಸಾಧ್ಯವಾಗಿತ್ತು. ದರ ಕಡಿಮೆ ಇದ್ದಿದ್ದರಿಂದ ಖರೀದಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿತ್ತು. ಆದರೆ, ಈಗಿನ ಬೆಲೆ ಏರಿಕೆಯು ರೈತರಿಗೆ ಉತ್ತಮ ಲಾಭ ತಂದುಕೊಡಲಿದ್ದು, ಸರ್ಕಾರದ ದಾಸ್ತಾನು ಗುರಿಯನ್ನು ತಲುಪಲು ಸಹಕಾರಿಯಾಗಲಿದೆ ಎಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಾಸಲಗಾಂವ್ ಎಪಿಎಂಸಿ ನಿರ್ದೇಶಕ ಜಯದತ್ತ ಹೋಲ್ಕರ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಉಭಯ ಸಂಸ್ಥೆಗಳಿಗೆ ತಲಾ 1 ಲಕ್ಷ ಟನ್ ಈರುಳ್ಳಿ ಖರೀದಿಸುವ ಗುರಿ ನೀಡಲಾಗಿದೆ.
ಇತ್ತೀಚೆಗೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಪ್ರಕ್ರಿಯೆಯಲ್ಲಿ ಉಂಟಾಗಿದ್ದ ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿ ಕಳೆದ ಒಂದು ತಿಂಗಳಲ್ಲಿ ದೇಶಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಶೇಕಡಾ 19 ರಷ್ಟು ಹೆಚ್ಚಾಗಿದ್ದು, ಸರಾಸರಿ ದರ ಕೆಜಿಗೆ 31.21 ರೂಪಾಯಿಗೆ ತಲುಪಿದೆ.
30.73 ಮಿಲಿಯನ್ ಟನ್ ಉತ್ಪಾದನೆ ನಿರೀಕ್ಷೆ
ಕೃಷಿ ಸಚಿವಾಲಯದ ಎರಡನೇ ಮುಂಗಡ ಅಂದಾಜಿನ ಪ್ರಕಾರ, 2025-26ರ ಬೆಳೆ ವರ್ಷದಲ್ಲಿ ದೇಶದಲ್ಲಿ ಒಟ್ಟು 30.73 ಮಿಲಿಯನ್ ಟನ್ ಈರುಳ್ಳಿ ಉತ್ಪಾದನೆಯಾಗುವ ನಿರೀಕ್ಷೆಯಿದೆ. ಇದು ಕಳೆದ ವರ್ಷದ ಉತ್ಪಾದನೆಗೆ (30.76 ಮಿಲಿಯನ್ ಟನ್) ಬಹುತೇಕ ಸಮನಾಗಿರುವುದರಿಂದ ದೇಶದಲ್ಲಿ ಈರುಳ್ಳಿ ಕೊರತೆಯಾಗುವ ಯಾವುದೇ ಆತಂಕವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಸದ್ಯ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳಲ್ಲಿ ಸಾಕಷ್ಟು ಪ್ರಮಾಣದ ಈರುಳ್ಳಿ ದಾಸ್ತಾನು ಲಭ್ಯವಿದೆ.
ಹಬ್ಬಗಳ ಸೀಸನ್‌ನಲ್ಲಿ ಬೆಲೆ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್
ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯನ್ನು ಬಂಡವಾಳ ಮಾಡಿಕೊಂಡು ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಲು ಯತ್ನಿಸುತ್ತಿದ್ದಾರಾದರೂ, ಸದ್ಯಕ್ಕೆ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬೇಡಿಕೆಯ ವ್ಯತ್ಯಾಸವಾಗಿಲ್ಲ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 70 ರಿಂದ 75 ರಷ್ಟು ಸಿಂಹಪಾಲು ಹೊಂದಿರುವ ರಬಿ (ಹಿಂಗಾರು) ಹಂಗಾಮಿನ ಈರುಳ್ಳಿ ಕೊಯ್ಲು ಈಗಾಗಲೇ ಮುಗಿದಿದೆ.
ಬರುವ ಅಕ್ಟೋಬರ್‌ನಲ್ಲಿ ಮುಂಗಾರು ಹಂಗಾಮಿನ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುವವರೆಗೂ ಬೆಲೆಗಳು ಸ್ಥಿರವಾಗಿರಲಿವೆ. ಅಕ್ಟೋಬರ್ ಅವಧಿಯಲ್ಲಿ ಸಾಲು ಸಾಲು ಹಬ್ಬಗಳ ಕಾರಣದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದರೆ, ಅದರ ನಿಯಂತ್ರಣಕ್ಕಾಗಿ ಸರ್ಕಾರ ಈಗ ಖರೀದಿಸುತ್ತಿರುವ ಈ ಬಫರ್ ಸ್ಟಾಕ್ ಈರುಳ್ಳಿಯನ್ನು ಹಂತಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕರ ಹಿತ ಕಾಯಲಿದೆ.
ಇದನ್ನೂ ಓದಿ: ಕಿರಾಣಿ ಅಂಗಡಿಗಳ ರಕ್ಷಣೆಗೆ ಮಹತ್ವದ ನಿರ್ಧಾರ, ಬ್ಲಿಂಕಿಟ್ ಸೇವೆ ನಿರ್ಬಂಧ!