ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (NPPA) ಹೃದಯ ಸಂಬಂಧಿ ಕಾಯಿಲೆ, ಮಧುಮೇಹ (Diabetes) ಮತ್ತು ಹಾರ್ಮೋನ್ (Good News) ಸಮಸ್ಯೆಗಳಿಗೆ ಬಳಸುವ ಒಟ್ಟು 42 ಔಷಧಗಳ ಬೆಲೆಯನ್ನು ಇಳಿಕೆ ಮಾಡಿದೆ. ಔಷಧಗಳ ಬೆಲೆ ನಿಯಂತ್ರಣ ಕಾಯ್ದೆ 2013ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಮೆಡಿಕಲ್ ಶಾಪ್‌ಗಳಲ್ಲಿ ಈ ಮಾತ್ರೆಗಳು ನಿಗದಿಪಡಿಸಿದ ಗರಿಷ್ಠ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವಂತಿಲ್ಲ.
ಯಾವ ಯಾವ ಔಷಧಗಳ ಬೆಲೆ ಇಳಿಕೆಯಾಗಿದೆ?
ಪ್ರಮುಖವಾಗಿ ದೀರ್ಘಕಾಲದ ಚಿಕಿತ್ಸೆಗೆ ಬಳಸುವ ಕಾಂಬಿನೇಷನ್ ಮಾತ್ರೆಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ:
• ಕೊಲೆಸ್ಟ್ರಾಲ್ ನಿಯಂತ್ರಣ ಔಷಧ: ಅಟೋರ್ವಾಸ್ಟಾಟಿನ್ ಮತ್ತು ಎಜೆಟಿಮೈಬ್ ಮಿಶ್ರಿತ ಮಾತ್ರೆಗಳ ಬೆಲೆ ಪ್ರತಿ ಟ್ಯಾಬ್ಲೆಟ್‌ಗೆ 21.36 ರೂ. ನಿಂದ 32.46 ರೂ. ಗೆ ನಿಗದಿಯಾಗಿದೆ.
• ಮಧುಮೇಹ (Sugar): ಸಕ್ಕರೆ ಕಾಯಿಲೆಗೆ ವ್ಯಾಪಕವಾಗಿ ಬಳಸುವ ಗ್ಲಿಕ್ಲಾಜೈಡ್ ಮತ್ತು ಮೆಟ್‌ಫಾರ್ಮಿನ್ ಮಾತ್ರೆ ಬೆಲೆ ಈಗ ಕೇವಲ 10.53 ರೂ. ಮಾತ್ರ.
• ಆ್ಯಂಟಿಬಯೋಟಿಕ್: ಬ್ಯಾಕ್ಟೀರಿಯಾ ಸೋಂಕಿಗೆ ಬಳಸುವ ಸೆಫಿಕ್ಸಿಮ್ ಮತ್ತು ಪೊಟ್ಯಾಸಿಯಮ್ ಕ್ಲಾವುಲನೇಟ್ ಮಾತ್ರೆಗೆ 25 ರೂ. ದರ ನಿಗದಿ ಮಾಡಲಾಗಿದೆ.
• ಹಾರ್ಮೋನ್ ಚಿಕಿತ್ಸೆ: ದುಬಾರಿ ಎನಿಸಿದ್ದ ಹಾರ್ಮೋನ್ ಚಿಕಿತ್ಸೆಯ ಮಾತ್ರೆಗಳ ಬೆಲೆಯನ್ನು ಕೂಡ 107 ರೂ. ನಿಂದ 120 ರೂ. ಒಳಗೆ ಮಿತಿಗೊಳಿಸಲಾಗಿದೆ.
ಹೆಚ್ಚು ಹಣ ವಸೂಲಿ ಮಾಡಿದರೆ ಬೀಳುತ್ತೆ ದಂಡ!
ಸರ್ಕಾರ ನಿಗದಿಪಡಿಸಿದ ಈ ಬೆಲೆಗಿಂತ ಹೆಚ್ಚಿನ ದರವನ್ನು ರೋಗಿಗಳಿಂದ ವಸೂಲಿ ಮಾಡುವಂತಿಲ್ಲ (ಜಿಎಸ್‌ಟಿ ಹೊರತುಪಡಿಸಿ). ಒಂದು ವೇಳೆ ಯಾವುದೇ ಔಷಧ ಕಂಪನಿ ಅಥವಾ ಮೆಡಿಕಲ್ ಸ್ಟೋರ್ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆದರೆ, ಅಂತಹವರು ಹೆಚ್ಚಿನ ಹಣವನ್ನು ಬಡ್ಡಿ ಸಮೇತ ಸರ್ಕಾರಕ್ಕೆ ಮರುಪಾವತಿಸಬೇಕಾಗುತ್ತದೆ. ಗ್ರಾಹಕರಿಗೆ ಪಾರದರ್ಶಕತೆ ಸಿಗಲಿ ಎಂಬ ಉದ್ದೇಶದಿಂದ ಹೊಸ ಬೆಲೆ ಪಟ್ಟಿಯನ್ನು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಸಾಮಾನ್ಯ ಜನರಿಗೆ ನಿರಾಳ ಪ್ರತಿದಿನ ಮಾತ್ರೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುವ ಮಧ್ಯಮ ವರ್ಗದ ಜನರಿಗೆ ಈ ನಿರ್ಧಾರ ದೊಡ್ಡ ಆಸರೆಯಾಗಲಿದೆ. “ಔಷಧ ಕಂಪನಿಗಳು ತಕ್ಷಣವೇ ಹೊಸ ದರವನ್ನು ಜಾರಿಗೆ ತರಬೇಕು ಮತ್ತು ಪರಿಷ್ಕೃತ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡಬೇಕು” ಎಂದು ಎನ್‌ಪಿಪಿಎ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರಿಂದಾಗಿ ಬಡ ಮತ್ತು ಸಾಮಾನ್ಯ ವರ್ಗದ ಜನರ ಚಿಕಿತ್ಸಾ ವೆಚ್ಚ ಗಣನೀಯವಾಗಿ ತಗ್ಗಲಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಬೆಚ್ಚಿಬೀಳಿಸುವ ಸತ್ಯ! ಒಂದೇ ವರ್ಷದಲ್ಲಿ 55 ಅಪ್ರಾಪ್ತ ಗರ್ಭಿಣಿಯರ ಸ್ಕ್ಯಾನಿಂಗ್