ರಾಯಚೂರು : ಗರ್ಭಿಣಿಯರ ಸುರಕ್ಷತೆ ದೃಷ್ಟಿಯಿಂದ ಮಾತೃತ್ವ ಸುರಕ್ಷತಾ ಅಭಿಯಾನವನ್ನ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಪ್ರತಿ ತಿಂಗಳು 9 ಹಾಗೂ 24ನೇ ತಾರೀಖಿನಂದು 2 ಬಾರಿ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ಇದೇ ಜ.22ರಂದು ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಗರ್ಭಿಣಿಯರಿಗಾಗಿಯೇ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಮಾತೃತ್ವ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಮುಂದಾಗಿರುವ ಸರ್ಕಾರ ತಾಯಂದಿರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣಾ ಶಿಬಿರಗಳನ್ನ ದೊಡ್ಡಮಟ್ಟದಲ್ಲಿ ರಾಜ್ಯದಾದ್ಯಂತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಕಿಕೊಂಡಿರುವ ಕ್ರಮಗಳು ಈ ಕೆಳಗಿನಂತಿದೆ.
ಗುಣಾತ್ಮಕ ಹೆರಿಗೆ ಸೇವೆಗಳನ್ನ ಒದಗಿಸುವುದು. ಆರಂಭಿಕ ANC ನೋಂದಣಿ, 4 ದಿನ ನಿತ್ಯದ ANC ಭೇಟಿಗಳನ್ನು ಖಚಿತಪಡಿಸಿಕೊಳ್ಳುವುದು, ಸಾಮಾನ್ಯ ಗರ್ಭಿಣಿ ಮಹಿಳೆಯರಿಗೆ 1 PMSMA ಭೇಟಿ ಮತ್ತು HRP ಗಳಿಗೆ ಹೆಚ್ಚುವರಿ 3 ಭೇಟಿಗಳು, ಪ್ರತಿ ಗರ್ಭಿಣಿ ಮಹಿಳೆಗೆ ಜನನ ಯೋಜನೆಯನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವುದು.
ಗರ್ಭಧಾರಣೆಯ 3 ತಿಂಗಳ ಮೊದಲು ಮತ್ತು ಗರ್ಭಧಾರಣೆಯ 1 ನೇ ತ್ರೈಮಾಸಿಕದಲ್ಲಿ ಪೋಲಿಕ್ ಆಮ್ಲ ಮಾತ್ರೆಗಳನ್ನು ನೀಡಲಾಗುತ್ತದೆ. 500 mcg ಕ್ಯಾಲ್ಸಿಯಂ ಅನ್ನು ಗರ್ಭಧಾರಣೆಯ 14 ನೇ ವಾರದಿಂದ ಹೆರಿಗೆ ಮತ್ತು 6 ತಿಂಗಳ ನಂತರದ ಅವಧಿಯವರೆಗೆ ನೀಡಲಾಗುತ್ತಿದೆ.