Sunday, January 25, 2026
Homeಟಾಪ್ ನ್ಯೂಸ್GOOD NEWS: ರೈತರಿಗೆ ಸಿಹಿ ಸುದ್ದಿ- MSP ದರದಲ್ಲಿ ಮೆಕ್ಕೆಜೋಳ ಖರೀದಿಗೆ ಸರ್ಕಾರ ಅನುಮತಿ

GOOD NEWS: ರೈತರಿಗೆ ಸಿಹಿ ಸುದ್ದಿ- MSP ದರದಲ್ಲಿ ಮೆಕ್ಕೆಜೋಳ ಖರೀದಿಗೆ ಸರ್ಕಾರ ಅನುಮತಿ

ಬೆಂಗಳೂರು: ಮೆಕ್ಕೆಜೋಳ (Corn) ಬೆಲೆ ಕುಸಿದು ಕಂಗಾಲಾಗಿರುವ ರೈತರು (Farmer) ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ನೀಡಲು ಬೀದಿಗಿಳಿದು ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಮೆಕ್ಕೆಜೋಳ ಬೆಳೆಗಾರರಿಗೆ ಇದೀಗ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಎಂಎಸ್‌ಪಿ ದರದಲ್ಲಿ ಮೆಕ್ಕೆಜೋಳ ಖರೀದಿಸಲು ಅನುಮತಿ ನೀಡಿದೆ.

ಹೌದು.. ಮೆಕ್ಕೆಜೋಳ ಖರೀದಿಗೆ ಕುಕ್ಕುಟ ಆಹಾರ ಉತ್ಪಾದಕರಿಗೆ ಅನುಮತಿ ನೀಡಿದ್ದು, ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧ ಸಭಾಂಗಣದಲ್ಲಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ಸಭೆ ನಡೆಸಿ ಮಹತ್ವದ ಮಾಹಿತಿ ನೀಡಿದ್ದರು. ರಾಜ್ಯದಲ್ಲಿ ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಶು ಹಾಗೂ ಕುಕ್ಕುಟ ಆಹಾರ ಉತ್ಪಾದಕರು ಕೇಂದ್ರ ಸರ್ಕಾರ ನಿಗದಿಪಡಿಸಿರುವ 2,400 ರೂ. ಕನಿಷ್ಠ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳವನ್ನು ಖರೀದಿಸಬೇಕು ಎಂದು ತಿಳಿಸಿದ್ದರು.

ಇದನ್ನೂ ಓದಿ: ದ್ವೇಷ ಭಾಷಣಕ್ಕೆ ಸರ್ಕಾರದ ಮೂಗುದಾರ..! ಸಂಪುಟ ಸಭೆಯಲ್ಲಿ ವಿಧೇಯಕ ಅಂಗೀಕಾರ

ರೈತರಿಂದ ಮೆಕ್ಕೆಜೋಳವನ್ನು ಕರ್ನಾಟಕ ಮಾರುಕಟ್ಟೆ ಫೆಡರೇಶನ್ ಮೂಲಕ ಖರೀದಿಸಿ ಸರಬರಾಜು ಮಾಡಲಾಗುವುದು. ಸಾಗಾಣಿಕಾ ವೆಚ್ಚ, ಲೋಡಿಂಗ್, ಅನ್ಲೋಡಿಂಗ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕುಕ್ಕುಟ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಹೇಳಿದ್ದರು.

ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ದರ ಕುಸಿದಿರುವುದರಿಂದ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಡಿಸ್ಟಿಲರಿಗಳು 7ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ. ಕೆಎಂಎಫ್ 50ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದಿದ್ದರು.

ಈ ಹಿಂದೆ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ರಾಜ್ಯದಲ್ಲಿರುವ ಈ ಅನಿಷ್ಠ ರೈತ ವಿರೋಧಿ ಸರ್ಕಾರವನ್ನು ತೆಗದುಹಾಕಬೇಕು. ಇವತ್ತು ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಇನ್ನು ಕೂಡ ಇತ್ಯರ್ಥವಾಗಿಲ್ಲ. ಈಗಾಗಲೇ ಮೆಕ್ಕೆಜೋಳ ಬೆಳೆಯುವ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು

ಲಕ್ಷ್ಮೀಶ್ವರದಲ್ಲಿ ಇಂದು ಹೋರಾಟಗಳು ನಡೆಯುತ್ತಿವೆ. ನವಲಗುಂದ, ಬಾಗಲಕೋಟೆ, ಶಿವಮೊಗ್ಗ ಕೋಲಾರ, ಹೊನ್ನಾಳಿ ಹಾಗೂ ಬೆಳಗಾವಿ.. ಹೀಗೆ ರಾಜ್ಯದ ಹಲವಾರು ಕಡೆಗಳಲ್ಲಿ ಹೋರಾಟಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ ಸಹ ಈ ರೈತ ವಿರೋಧಿ ರಾಜ್ಯ ಸರ್ಕಾರ ಯಾವುದೇ ರೀತಿಯ ಖರೀದಿ ಕೇಂದ್ರವನ್ನು ತೆರೆಯದೇ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದನೆ ಮಾಡದೇ ಇರುವುದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೇ ತಕ್ಷಣವೇ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದರು.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!