ಬೆಂಗಳೂರು: ಪ್ರಸಕ್ತ ವರ್ಷದ ಜುಲೈ ವೇಳೆಗೆ ಮತ್ತೊಂದು ಮೆಟ್ರೋ ಮಾರ್ಗ ಆರಂಭವಾಗುವ ಸಾಧ್ಯತೆಯಿದೆ. ಬೊಮ್ಮಸಂದ್ರದಿಂದ ಹೆಚ್ಚು ದಟ್ಟಣೆಯಿರುವ ಸೆಂಟ್ರಲ್ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ನ ನಮ್ಮ ಮೆಟ್ರೋದ ಹಳದಿ ಮಾರ್ಗ ಇನ್ನು ಮೂರು ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ತೆರೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಆರ್ ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹೊಂಗಸಂದ್ರ, ಕೂಡ್ಲು ಗೇಟ್, ಹೊಸ ರಸ್ತೆ, ಬೆರಟೆನ ಅಗ್ರಹಾರ, ಕೋನಪ್ಪನ ಅಗ್ರಹಾರ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಹೆಬ್ಬಗೋಡಿ ರಸ್ತೆಯಲ್ಲಿ ನಿಲುಗಡೆಯಾಗಲಿದೆ. ಈಗಾಗಲೇ ಹಳಿಗಳು ಮತ್ತು ನಿಲ್ದಾಣಗಳು ಸೇರಿದಂತೆ ಬಹುತೇಕ ನಿರ್ಮಾಣ ಕಾರ್ಯಗಳು ಪೂರ್ಣಗೊಂಡಿದ್ದು, ಇನ್ನು ಕೆಲವು ಸಣ್ಣಪುಟ್ಟ ಕೆಲಸಗಳು ಉಳಿದಿವೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಎಲೆಕ್ಟ್ರಾನಿಕ್ಸ್ ಸಿಟಿ ಭಾಗದಲ್ಲಿರುವ ಮಾರ್ಗವನ್ನು ಜೂನ್‌ಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಎಲ್ಲವೂ ವೇಳಾಪಟ್ಟಿಯ ಪ್ರಕಾರ ನಡೆದರೆ ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಹಳದಿ ಮೆಟ್ರೋ ಮಾರ್ಗ ತೆರೆಯಲಾಗುವುದು ಎಂದು ಅಂದಾಜಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬೆಂಗಳೂರಿನಲ್ಲಿ ಬಹು ನಿರೀಕ್ಷಿತ ವೈಟ್‌ಫೀಲ್ಡ್‌ನಿಂದ ಕೆಆರ್ ಪುರಂ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ಇದು ಬೆಂಗಳೂರು ಮೆಟ್ರೋದ 2 ಹಂತದ ಯೋಜನೆಯ 13.71 ಕಿಮೀ ವಿಸ್ತರಣೆಯಾಗಿದ್ದು, ಸುಮಾರು 4,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. BMRCL 2025 ರ ಜೂನ್ ವೇಳೆಗೆ 175-ಕಿಲೋಮೀಟರ್ ಮೆಟ್ರೋ ಜಾಲವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು BMRCL ನ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಅವರು ಹೇಳಿದರು.