ನವದೆಹಲಿ: ಭಾರತೀಯ ವಿಮಾನ ಪ್ರಯಾಣಿಕರಿಗೆ ಜರ್ಮನಿ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಭಾರತೀಯ ನಾಗರಿಕರು ಜರ್ಮನಿ ದೇಶದ ಮೂಲಕ ಬೇರೆ ಯಾವುದೇ ದೇಶಗಳಿಗೆ ಪ್ರಯಾಣಿಸುವಾಗ ಇನ್ಮುಂದೆ ‘ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾ’ (Airport Transit Visa) ಹೊಂದುವ (Good News) ಅಗತ್ಯವಿಲ್ಲ ಎಂದು ನವದೆಹಲಿಯಲ್ಲಿರುವ ಜರ್ಮನ್ ರಾಯಭಾರ ಕಚೇರಿ ಪ್ರಕಟಿಸಿದೆ.
ನಾಳೆಯಿಂದಲೇ ಜಾರಿಗೆ ಬರಲಿದೆ ರೂಲ್ಸ್
ಈ ಐತಿಹಾಸಿಕ ತೀರ್ಮಾನವನ್ನು ಜರ್ಮನಿಯ ಅಧಿಕೃತ ಕಾನೂನು ಗಜೆಟ್‌ನಲ್ಲಿ ಪ್ರಕಟಿಸಲಾಗಿದ್ದು, ಬುಧವಾರದಿಂದಲೇ (ಜೂನ್ 3) ಈ ಹೊಸ ನಿಯಮ ಜಾರಿಗೆ ಬರಲಿದೆ. ಜರ್ಮನಿಯ ಈ ಹೊಸ ನೀತಿಯಿಂದಾಗಿ ಯುರೋಪ್ ಮಾರ್ಗವಾಗಿ ಸಂಚರಿಸುವ ಸಾವಿರಾರು ಭಾರತೀಯ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.
ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಅವರು ಭಾರತಕ್ಕೆ ಅಧಿಕೃತ ಪ್ರವಾಸ ಬಂದಿದ್ದರು. ಚಾನ್ಸಲರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಅವರು ಏಷ್ಯಾ ಖಂಡ ಹಾಗೂ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು. ಆ ಉನ್ನತ ಮಟ್ಟದ ಪ್ರವಾಸದ ವೇಳೆ ಉಭಯ ದೇಶಗಳ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ಫಲಶೃತಿಯಾಗಿಯೇ ಈಗ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಜರ್ಮನ್ ರಾಯಭಾರ ಕಚೇರಿ ತಿಳಿಸಿದೆ. ಭಾರತದೊಂದಿಗಿನ ರಾಜತಾಂತ್ರಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಉಭಯ ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ವೃದ್ಧಿಸುವುದು ಹಾಗೂ ಜನರ ಸುಲಭ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಜರ್ಮನಿ ಸರ್ಕಾರ ಈ ಪ್ರಮುಖ ಹೆಜ್ಜೆ ಇಟ್ಟಿದೆ.
ಇಲ್ಲಿಯವರೆಗೆ ಜರ್ಮನಿಯ ವಿಮಾನ ನಿಲ್ದಾಣಗಳ ಮೂಲಕ ಮೂರನೇ ದೇಶಕ್ಕೆ ಕನೆಕ್ಟಿಂಗ್ ಫ್ಲೈಟ್ ಪಡೆದು ಪ್ರಯಾಣಿಸುವ ಭಾರತೀಯರು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಕಡ್ಡಾಯವಾಗಿ ವಿಶೇಷ ಟ್ರಾನ್ಸಿಟ್ ವೀಸಾವನ್ನು ಹೊಂದಿರಬೇಕಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಕಾಯುವ ಸಮಯದಲ್ಲಿ ಭಾರತೀಯರು ಸಾಕಷ್ಟು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ, ಈಗ ಈ ವೀಸಾ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದರಿಂದ, ಭಾರತೀಯ ಪ್ರಯಾಣಿಕರು ಜರ್ಮನಿಯ ವಿಮಾನ ನಿಲ್ದಾಣಗಳಲ್ಲಿ ಯಾವುದೇ ವೀಸಾ ತೊಂದರೆಗಳಿಲ್ಲದೆ ಸುಲಭವಾಗಿ ಲೇಓವರ್ (Layover) ಮುಗಿಸಿಕೊಂಡು ತಮ್ಮ ಮುಂದಿನ ಸ್ಥಳಗಳಿಗೆ ಹೋಗಬಹುದಾಗಿದೆ
ಇದನ್ನೂ ಓದಿ : ಇದು ಹೆಂಗಿದೆ ನೋಡಿ ..! ಮೆಟಾ ಎಐ ಬಳಸಿ ಮೆಟಾ ಒಡೆತನದ ಇನ್ಸ್ಟಾಗ್ರಾಂ ಖಾತೆಗಳು ಹ್ಯಾಕ್!