ನವದೆಹಲಿ: ದೇಶದ ನಾಗರಿಕರಿಗೆ ಅತ್ಯಗತ್ಯವಾಗಿರುವ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ. ಮೈಆಧಾರ್ (myAadhaar) ಪೋರ್ಟಲ್ ಮೂಲಕ ಉಚಿತವಾಗಿ ದಾಖಲೆಗಳನ್ನು ನವೀಕರಿಸುವ (Aadhar) ಸೇವೆಯ ಅವಧಿಯನ್ನು ಮತ್ತೊಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರಿಂದ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ, ಈಗ ಈ ಉಚಿತ ಸೌಲಭ್ಯವನ್ನು 2027ರ ಜೂನ್ 14ರ ವರೆಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಪ್ರಾಧಿಕಾರವು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಆಧಾರ್ ಕೇಂದ್ರಗಳಲ್ಲಿ ಶುಲ್ಕ ಪಾವತಿ ಅಗತ್ಯ
ಮುಖ್ಯವಾಗಿ ಹಲವು ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಇದುವರೆಗೆ ಒಮ್ಮೆಯೂ ತಮ್ಮ ಗುರುತಿನ ಚೀಟಿ ಅಥವಾ ವಿಳಾಸದ ದಾಖಲೆಗಳನ್ನು ನವೀಕರಿಸದ ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಆಧಾರ್ ಡೇಟಾಬೇಸ್‌ನ ನಿಖರತೆಯನ್ನು ಕಾಯ್ದುಕೊಳ್ಳಲು ನಾಗರಿಕರು ತಮ್ಮ ಗುರುತು ಮತ್ತು ವಿಳಾಸದ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಯುಐಡಿಎಐ ಉತ್ತೇಜಿಸುತ್ತಿದೆ. ಮೈಆಧಾರ್ ಜಾಲತಾಣಕ್ಕೆ ಭೇಟಿ ನೀಡಿ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಮೂಲಕ ಲಾಗಿನ್ ಆಗಿ, ತಮ್ಮ ಪ್ರೊಫೈಲ್ ವಿವರಗಳನ್ನು ಪರಿಶೀಲಿಸಿ ಸರಿಯಾದ ದಾಖಲೆಗಳನ್ನು ಉಚಿತವಾಗಿ ಸಲ್ಲಿಸಬಹುದಾಗಿದೆ. ಪೋರ್ಟಲ್ ಮೂಲಕ ಜೂನ್ 2027ರ ವರೆಗೆ ಈ ಸೇವೆ ಸಂಪೂರ್ಣ ಉಚಿತವಾಗಿದ್ದರೂ, ನೇರವಾಗಿ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆ ನವೀಕರಿಸಲು 75 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ.
The #mAadhaar App is retiring soon. Now experience a smarter, faster, and more secure digital journey with the new #AadhaarApp. From secure QR-based #Aadhaar sharing to enhanced privacy controls and seamless access to Aadhaar services — the new app is designed to make your… pic.twitter.com/snfeUx4Rgr
— Aadhaar (@UIDAI) May 15, 2026
ಇದೇ ವೇಳೆ, ಇತರ ಡೆಮೊಗ್ರಾಫಿಕ್ ವಿವರಗಳಾದ ಹೆಸರು, ಲಿಂಗ, ಜನ್ಮ ದಿನಾಂಕ ಅಥವಾ ಮೊಬೈಲ್ ಸಂಖ್ಯೆಯನ್ನು ಪ್ರತ್ಯೇಕವಾಗಿ ನವೀಕರಿಸಲು 75 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಬಯೋಮೆಟ್ರಿಕ್ ನವೀಕರಣಗಳಿಗೆ (ಬೆರಳುಚ್ಚು, ಐರಿಸ್ ಮತ್ತು ಫೋಟೋ) 125 ರೂಪಾಯಿ ಶುಲ್ಕವಿರಲಿದ್ದು, 5 ರಿಂದ 7 ವರ್ಷ ಹಾಗೂ 15 ರಿಂದ 17 ವರ್ಷದೊಳಗಿನ ಮಕ್ಕಳ ಮೊದಲ ಅಪ್‌ಡೇಟ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ಅಲ್ಲದೆ, 7 ರಿಂದ 15 ವರ್ಷದೊಳಗಿನ ಮಕ್ಕಳಿಗೆ 2026ರ ಸೆಪ್ಟೆಂಬರ್ 30ರ ವರೆಗೆ ಬಯೋಮೆಟ್ರಿಕ್ ಅಪ್‌ಡೇಟ್‌ಗೆ ವಿಶೇಷ ವಿನಾಯಿತಿ ನೀಡಲಾಗಿದ್ದು, ಇದು ಉಚಿತವಾಗಿರುತ್ತದೆ.
mAadhaar ಆಪ್ ಸ್ಥಗಿತ
ಮತ್ತೊಂದು ಪ್ರಮುಖ ವಿಚಾರ ಎಂದರೆ, ಪ್ರಸ್ತುತ ಚಾಲ್ತಿಯಲ್ಲಿರುವ ‘mAadhaar’ ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಯುಐಡಿಎಐ ತಿಳಿಸಿದೆ. ಇದರ ಬದಲಾಗಿ ಸಾರ್ವಜನಿಕರು ಹೊಸ ಆಧಾರ್ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಈ ಹೊಸ ಆ್ಯಪ್ ಅತ್ಯಂತ ಸುರಕ್ಷಿತವಾದ ಕ್ಯೂಆರ್ ಕೋಡ್ ಆಧಾರಿತ ಆಧಾರ್ ಹಂಚಿಕೆ, ಸುಧಾರಿತ ಗೌಪ್ಯತೆ ನಿಯಂತ್ರಣಗಳು ಮತ್ತು ಸುಲಭ ಡಿಜಿಟಲ್ ಸೇವೆಗಳನ್ನು ಒಳಗೊಂಡಿದ್ದು, ಬಳಕೆದಾರರಿಗೆ ಹೆಚ್ಚು ಸರಳ ಮತ್ತು ಅನುಕೂಲಕರ ಅನುಭವವನ್ನು ನೀಡಲಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್, ಪೋಷಕರಿಗೆ ಮಹತ್ವದ ಸೂಚನೆ