ಬೆಂಗಳೂರು : ದುಬೈದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನಿನ್ನೆಯಷ್ಟೇ ವಜಾಗೊಳಿಸಿ ಆದೇಶ ಹೊರಡಿಸಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ತಮ್ಮ ವಕೀಲರ ಮೂಲಕ ಜಾಮೀನು ಕೋರಿ ರನ್ಯಾ ಅವರು ಸೆಷನ್ಸ್ ಕೋರ್ಟ್ಗೆ ಇಂದು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸೋಮವಾರದಂದು ಬರುವ ಸಾಧ್ಯತೆ ಇದೆ.
ನ್ಯಾ.ವಿಶ್ವನಾಥ್ ಗೌಡರ್ ಅವರು ನಿನ್ನೆ ರನ್ಯಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದರು. ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು DRI ಅಧಿಕಾರಿಗಳು ಪಾಲಿಸಿಲ್ಲ. ಬಂಧನ ಮೆಮೊವನ್ನ ನೀಡಿಲಾಗಿಲ್ಲ. ನಮ್ಮ ಕಕ್ಷಿದಾರರನ್ನು ನಿದ್ದೆ ಮಾಡಲು ಅವಕಾಶ ನೀಡದೇ ಅವರ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗಲ್ಲ ಎಂದು ರನ್ಯಾ ಪರ ಹಿರಿಯ ವಕೀಲ ಕಿರಣ್ ಜವಳಿ ವಾದಿಸಿದ್ದರು.
ಕಸ್ಟಮ್ಸ್ ಕಾಯ್ದೆಗೆ ಅನುಗುಣವಾಗಿ ರನ್ಯಾರನ್ನು ಅರೆಸ್ಟ್ ಮಾಡಲಾಗಿದೆ. ಹಾಗೊಮ್ಮೆ ಕಾಯ್ದೆಯನ್ನು ಪಾಲಿಸದಿದ್ದರೂ ಮೇಲ್ನೋಟಕ್ಕೆ ಆರೋಪವಿದ್ದಾಗ ವಶಕ್ಕೆ ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಚಿನ್ನ ಕಳ್ಳ ಸಾಗಣೆಯಲ್ಲಿ ದೊಡ್ಡ ಜಾಲವಿದ್ದು, ಅದನ್ನು ಭೇದಿಸಬೇಕಿದೆ ಎಂದು ಪ್ರಾಸಿಕ್ಯೂಷನ್ ಪರ ಹಿರಿಯ ಸ್ಥಾಯಿ ವಕೀಲ ಮಧು ಎನ್.ರಾವ್ ಅವರು ಪ್ರತಿವಾದಿಸಿದ್ದರು.
ಕಳೆದ ಮಾ.3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಗೋಲ್ಡ್ ಸ್ಮಗ್ಲಿಂಗ್ ಆರೋಪದಡಿ ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು, ಅವರಿಂದ ರೂ.12.86 ಕೋಟಿ ಮೌಲ್ಯದ 14.2 Kg ಚಿನ್ನವನ್ನು ಸೀಜ್ ಮಾಡಿದ್ದರು. ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ರನ್ಯಾ ಚಿನ್ನವನ್ನು ಬೆಲ್ಟ್ & ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎಂಬ ಆರೋಪವಿದೆ.