ಗ್ಲಾಸ್ಗೋದಲ್ಲಿ(Glasgow) ನಡೆದ 11 ದಿನಗಳ 2026ರ ಕಾಮನ್‌ವೆಲ್ತ್ ಕ್ರೀಡಾಕೂಟವು(Commonwealth Games) ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ(Closing ceremony) ಮುಕ್ತಾಯಗೊಂಡಿದೆ. ಸಮಾರೋಪ ಸಮಾರಂಭದಲ್ಲಿ ಸ್ಕಾಟ್ಲೆಂಡ್‌ನಿಂದ ಕಾಮನ್‌ವೆಲ್ತ್ ಗೇಮ್ಸ್ ಧ್ವಜ ಹಾಗೂ ಬ್ಯಾಟನ್ ಅನ್ನು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. 2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಹಮದಾಬಾದ್ ಆತಿಥ್ಯ ವಹಿಸಲಿದ್ದು, ಶತಮಾನೋತ್ಸವದ ಈ ಕ್ರೀಡಾಕೂಟಕ್ಕೆ ಭಾರತ ಸಜ್ಜಾಗುತ್ತಿದೆ.
ಧ್ವಜ ಹಸ್ತಾಂತರದ ವೈಭವ
ಗ್ಲಾಸ್ಗೋ ಲಾರ್ಡ್ ಪ್ರೊವೊಸ್ಟ್ ಜಾಕ್ವೆಲಿನ್ ಮೆಕ್‌ಲಾರೆನ್ ಅವರು ಸ್ಕಾಟ್ಲೆಂಡ್ ಪ್ರತಿನಿಧಿಗಳು ಹಾಗೂ ಸಿಡಬ್ಲ್ಯೂಜಿ ಅಧ್ಯಕ್ಷ ಡಾ. ಡೊನಾಲ್ಡ್ ರುಕರೆ ಅವರ ಸಮ್ಮುಖದಲ್ಲಿ ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಾಂಘವಿ, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಪಿ.ಟಿ. ಉಷಾ ಅವರಿಗೆ ಸಿಡಬ್ಲ್ಯೂಜಿ ಧ್ವಜವನ್ನು ಹಸ್ತಾಂತರಿಸಿದರು. ಭಾರತವು ಈ ಹಿಂದೆ 2010ರಲ್ಲಿ ನವದೆಹಲಿಯಲ್ಲಿ ಯಶಸ್ವಿಯಾಗಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಿತ್ತು.
ಸಮಾರೋಪದಲ್ಲಿ ಭಾರತೀಯರ ಮೆರಗು
ಮಹಿಳೆಯರ 57 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಜೈಸ್ಮಿನ್ ಲಂಬೋರಿಯಾ ಸಮಾರೋಪ ಸಮಾರಂಭದ ಪಥಸಂಚಲನದಲ್ಲಿ ಭಾರತೀಯ ತಂಡದ ಧ್ವಜಧಾರಿಯಾಗಿದ್ದರು. ಭಾರತದ ಪರ ಗಾಯಕ ಶಂಕರ್ ಮಹದೇವನ್ ಹಾಗೂ ತಂಡದ ಸಾಂಸ್ಕೃತಿಕ ಪ್ರದರ್ಶನವು ಪ್ರೇಕ್ಷಕರ ಮನಸೆಳೆಯಿತು. ಎಡಿನ್‌ಬರ್ಗ್‌ನ ಡ್ಯೂಕ್ ಪ್ರಿನ್ಸ್ ಎಡ್ವರ್ಡ್ ಅವರು ಕ್ರೀಡಾಕೂಟವನ್ನು ಮುಕ್ತಾಯಗೊಳಿಸುತ್ತಾ, 2030ರಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿರುವ 24ನೇ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾಗವಹಿಸುವ ಎಲ್ಲಾ ದೇಶಗಳ ಕ್ರೀಡಾಪಟುಗಳಿಗೆ ಆಹ್ವಾನ ನೀಡಿದರು.
ಪದಕ ಪಟ್ಟಿಯಲ್ಲಿ ಭಾರತಕ್ಕೆ 4ನೇ ಸ್ಥಾನ
2026ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತಂಡವು 13 ಚಿನ್ನ, 17 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದು ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಗಳಿಸಿದೆ. 2022ರ ಬರ್ಮಿಂಗ್‌ಹ್ಯಾಮ್ ಕ್ರೀಡಾಕೂಟಕ್ಕೆ ಹೋಲಿಸಿದರೆ ಪದಕಗಳ ಸಂಖ್ಯೆ ಕಡಿಮೆಯಾಗಿದ್ದರೂ, ಹಿಂದಿನ ಹಲವು ಪ್ರಮುಖ ಕ್ರೀಡೆಗಳನ್ನು ಈ ಬಾರಿ ಗ್ಲಾಸ್ಗೋ ಆವೃತ್ತಿಯಿಂದ ಕೈಬಿಡಲಾಗಿತ್ತು ಎಂಬುದು ಗಮನಾರ್ಹ.
ಇದನ್ನೂ ಓದಿ : ಟಿ ಸಿಎಸ್ ಲೈಂಗಿಕ ಕಿರುಕುಳ, ಮತಾಂತರ ಯತ್ನ ಪ್ರಕರಣ – ಐವರು ಆರೋಪಿಗಳಿಗೆ ಜಾಮೀನು