ನವದೆಹಲಿ: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಅತ್ಯುತ್ತಮ ಸಾಧನೆ ಮಾಡಿದ್ದು, ಜಿಐಎಸ್-ಆಧಾರಿತ ಯುಟಿಲಿಟಿ ಆಸ್ತಿ ನಿರ್ವಹಣಾ ವೇದಿಕೆಯ ಜಲಪಥಕ್ಕಾಗಿ ಪ್ರತಿಷ್ಠಿತ ಜಿಯೋಸ್ಪೇಷಿಯಲ್ ಎಕ್ಸಲೆನ್ಸ್ ಪ್ರಶಸ್ತಿಗೆ (Geospatial Excellence Award) ಭಾಜಿನವಾಗಿದೆ.
ನವದೆಹಲಿಯ (New Delhi) ಭಾರತ್ ಮಂಟಪಂನಲ್ಲಿ ನಡೆದ ಜಿಯೋಸ್ಮಾರ್ಟ್ ಇಂಡಿಯಾ 2025 ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮ್ಮೇಳನದ ಸಮಾರೋಪ ಅಧಿವೇಶನದಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷರಾದ ಹಾಗೂ ಐಎಎಸ್ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದ ನಂತರ ಮಾತನಾಡಿದ ಡಾ. ಮನೋಹರ್ ಅವರು, ಜಿಯೋಸ್ಪೇಷಿಯಲ್ ಮ್ಯಾಪಿಂಗ್ ತಂತ್ರಜ್ಞಾನದ ಮೂಲಕ ಆಸ್ತಿಗಳ ಡಿಜಿಟಲೀಕರಣ, ರಿಯಲ್ ಟೈಮ್ ಡೇಟಾ ಇಂಟಿಗ್ರೇಷನ್‌ನಲ್ಲಿ ಬೆಂಗಳೂರು ಜಲಮಂಡಳಿಯ ಸಾಧನೆಗಳನ್ನು ಗುರುತಿಸಿದೆ. ಈ ಮೂಲಕ ಸಾವಿರಾರು ನೀರು ಮತ್ತು ಒಳಚರಂಡಿ ಆಸ್ತಿಗಳನ್ನು ಏಕೀಕೃತ ವೇದಿಕೆಯಲ್ಲಿ ಕೇಂದ್ರೀಕರಿಸಲು ಸಹಾಯ ಮಾಡಿದೆ. ಇದು ಯೋಜನಾ ಪ್ರಕ್ರಿಯೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯ ದಕ್ಷತೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.
ಈ ಪ್ರಶಸ್ತಿಯು ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಯನ್ನು ಒದಗಿಸುವ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರ ದೂರದೃಷ್ಟಿಯಿಂದ ಈ ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಗಿದೆ ಎಂದರು.
ಆಧುನಿಕಗೊಳ್ಳಲಿದೆ ಜಲಪಥ ತಂತ್ರಜ್ಞಾನ:
ಬೆಂಗಳೂರು ಜಲಮಂಡಳಿಯು ಜಲಪಥ ತಂತ್ರಜ್ಞಾನವನ್ನು ಇನ್ನಷ್ಟು ಆಧುನಿಕಗೊಳಿಸಲಿದೆ. ಮುಂದಿನ ಹಂತದಲ್ಲಿ ಸುಧಾರಿತ ಭೌಗೋಳಿಕ – ಪ್ರಾದೇಶಿಕ ವಿಶ್ಲೇಷಣೆಗಳು, ಪ್ರಿಡಿಕ್ಟಿವ್ ಮೆಂಟೇನೇನ್ಸ್ ಉಪಕರಣಗಳು ಮತ್ತು ರೀಯಲ್ ಟೈಮ್ ಯೋಜನೆಗಳ ಮೇಲ್ವಿಚಾರಣೆಯನ್ನು ಮಾಡಲು ಅನುವು ಮಾಡಿಕೊಡಲಿದೆ. ಈ ನವೀಕರಣಗಳು ಸೇವಾ ವಿತರಣೆಯನ್ನು ಬಲಪಡಿಸುತ್ತವೆ, ನೀರಿನ ನಷ್ಟವನ್ನು ಕಡಿಮೆ ಮಾಡುತ್ತವೆ ಮತ್ತು ಬೆಂಗಳೂರಿನ ಭವಿಷ್ಯಕ್ಕಾಗಿ ಸಿದ್ಧವಾಗಿರುವ ಜಲ ಜಾಲವನ್ನು ನಿರ್ಮಿಸಲಿವೆ ಎಂದು ಹೇಳಿದರು.
ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರರಾದ ಸನತ್ ಹಾಗೂ ಸಹಾಯಕ ಮುಖ್ಯ ಅಭಿಯಂತರಾದ ಮಹೇಶ್ವರಪ್ಪ ಉಪಸ್ಥಿತರಿದ್ದರು.