ಬೆಂಗಳೂರು : ನಗರದ (Bengaluru) ಐತಿಹಾಸಿಕ ಕೆ.ಆರ್.ಮಾರುಕಟ್ಟೆ (KR Market) ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಖ್ಯವಾಗಿಟ್ಟುಕೊಂಡು ಜಿಬಿಎ (GBA) ವ್ಯಾಪ್ತಿಯ ಕೇಂದ್ರ ನಗರ ಪಾಲಿಕೆ ಆಯುಕ್ತರಾದ ಶ್ರೀ ಜಗದೀಶ್ ಜಿ ಮಾತನಾಡಿದ್ದಾರೆ. ನಗರದ 5 ಕಾರ್ಪೊರೇಷನ್‌ಗಳ ವ್ಯಾಪ್ತಿಯಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯುತ್ತಿದ್ದು, ಪ್ರಮುಖ ಮತ್ತು ಉಪ ಮುಖ್ಯ ರಸ್ತೆಗಳ ಒಟ್ಟು 250 ಕಿಲೋಮೀಟರ್ ಫುಟ್‌ಪಾತ್ ಪೈಕಿ ಈಗಾಗಲೇ 200 ಕಿಲೋಮೀಟರ್ ಪ್ರದೇಶವನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಬಾಕಿ ಇರುವ 50 ಕಿಲೋಮೀಟರ್ ವ್ಯಾಪ್ತಿಯನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ 20-25 ದಿನಗಳಿಂದ ಈ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಮಾರುಕಟ್ಟೆ ಸೇರಿದಂತೆ ನಗರದ ಮುಖ್ಯ ರಸ್ತೆಗಳ ಬದಿ ವ್ಯಾಪಾರ ನಡೆಸುತ್ತಿರುವ ಪ್ರತಿಯೊಬ್ಬರಿಗೂ ಈಗಾಗಲೇ ಸ್ಪಷ್ಟ ಜಾಗೃತಿ ಮೂಡಿಸಲಾಗಿದೆ. ಫುಟ್‌ಪಾತ್‌ನಲ್ಲಿ ಅಂಗಡಿ ಹಾಗೂ ಶೆಡ್‌ಗಳನ್ನು ಹಾಕಿಕೊಂಡಿರುವ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಬೇಕು. ಪಾಲಿಕೆಯ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಬಂದು ಬಲವಂತವಾಗಿ ತೆರವುಗೊಳಿಸುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು ಮತ್ತು ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಪಾದಚಾರಿಗಳ ಹಕ್ಕು ಮತ್ತು ಸುರಕ್ಷತೆಯನ್ನು ಕಾಯುವುದು ಪಾಲಿಕೆಯ ಪ್ರಾಥಮಿಕ ಕರ್ತವ್ಯವಾಗಿದೆ. ಕೆ.ಆರ್. ಮಾರುಕಟ್ಟೆಯಂತಹ ಜನನಿಬಿಡ ಪ್ರದೇಶಗಳಲ್ಲಿ ಫುಟ್‌ಪಾತ್ ಒತ್ತುವರಿಯಾದರೆ ಪಾದಚಾರಿಗಳು ರಸ್ತೆಗೆ ಇಳಿದು ನಡೆಯಬೇಕಾಗುತ್ತದೆ, ಇದು ಪ್ರಾಣಾಪಾಯಕ್ಕೆ ದಾರಿಯಾಗುತ್ತದೆ. ಬಡವರ ಕಣ್ಣೀರು ಎನ್ನುವುದಕ್ಕಿಂತಲೂ ರಸ್ತೆಯಲ್ಲಿ ನಡೆಯುವ ಪ್ರತಿಯೊಬ್ಬ ಸಾಮಾನ್ಯ ಪಾದಚಾರಿಯ ಜೀವ ರಕ್ಷಣೆ ಅತ್ಯಂತ ಮುಖ್ಯ. ಬೀದಿ ಬದಿ ವ್ಯಾಪಾರಿಗಳಿಗಾಗಿ ‘ವೆಂಡಿಂಗ್ ಕಮಿಟಿ’ ರಚಿಸಿ, ‘ವೆಂಡಿಂಗ್ ಜೋನ್’ಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದ್ದು, ನಿಯಮಾನುಸಾರ ಅವರಿಗೆ ಪರ್ಯಾಯ ಅವಕಾಶ ಕಲ್ಪಿಸಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದರು.