ಹಾಸನ: ದೇವೇಗೌಡರ (HD Deve gowda) ಬಗ್ಗೆ ಹಗುರವಾಗಿ ಮಾತನಾಡುವ ಶಾಸಕ ಶಿವಲಿಂಗೇಗೌಡ (Shivalingegowda) ಅವರ ನಡೆ ಖಂಡನೀಯ ಎಂದು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವತ್ತು ದೇವೇಗೌಡ ಇಲ್ಲದಿದ್ದರೆ, ಇಂದು ಶಿವಲಿಂಗೇಗೌಡ ಅವರು ಶಾಸಕರೇ ಆಗುತ್ತಿರಲಿಲ್ಲ. ಆ ಋಣ ಇಟ್ಟುಕೊಂಡು ಮಾತನಾಡಬೇಕು. ನನಗೆ ಸೋಮಾರಿ ಎಂಪಿ ಎಂದು ಹೇಳಿಕೆ ನೀಡಲು ಅವರು ಯಾವತ್ತೂ ನನಗೆ ಕರೆ ಮಾಡಿದ್ದಾರೆ? ಅವರ ಹೇಳಿಕೆಯನ್ನು ಗಮನಿಸಿದ್ದೇನೆ ಎಂದು ಕಿಡಿಕಾರಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಬೈದುಕೊಂಡು ಓಡಾಡಿದರೆ ಕಾಂಗ್ರೆಸ್ (Congress) ಹೈ ಕಮಾಂಡ್‌ನವರು ವಿಶೇಷ ಸ್ಥಾನ ನೀಡುತ್ತಾರೆ ಎಂಬ ಭಾವನೆ ಇದ್ದರೆ, ಅಂತಹ ಬುದ್ದಿಯನ್ನು ಬಿಟ್ಟು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇವರು ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ, ಯಾವ ಅನುದಾನ ತಂದಿದ್ದಾರೆ? ಏನು ಕೆಲಸ ಮಾಡಿದ್ದಾರೆ ಹೇಳಲಿ?. ಸುಮ್ಮನೇ ಬಾಯಿಗೆ ಬಂದಂತೆ 100 ಕೋಟಿ 200 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದು ಹೇಳುವ ಬದಲಾಗಿ ಎಲ್ಲಿಗೆ ಅನುದಾನ ಕೊಟ್ಟಿದ್ದಾರೆ ಎಂದು ಹೇಳಲಿ ಸ್ಪಷ್ಟಪಡಿಸಲಿ ಎಂದು ಪ್ರಶ್ನಿಸಿದ್ದಾರೆ.
ನಾನು ಅರಸೀಕೆರೆಯ 23 ಪಂಚಾಯಿತಿಗಳಿಗೆ ಭೇಟಿ ನೀಡಿದ್ದೇನೆ, ಜನರ ಸಮಸ್ಯೆ ತಿಳಿದಿದ್ದೇನೆ. ಶಿವಲಿಂಗೇಗೌಡರ ಬಗ್ಗೆ ಮಾತನಾಡುವುದಕ್ಕೆ ನನಗೆ ಸಮಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.