ಮಾಜಿ ಸಂಸದ ಮತ್ತು ಮಂಡ್ಯ ಜಿಲ್ಲೆಯ ಪ್ರಭಾವಿ ನಾಯಕ ಎಲ್ ಆರ್ ಶಿವರಾಮೇ ಗೌಡ ಅವರು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಮೇಗೌಡ ಅವರನ್ನು ಪಕ್ಷದ ಪ್ರಮುಖರು ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಶಿವರಾಮೇ ಗೌಡರ ಜೊತೆಗೆ ಅವರ ಪುತ್ರ ಮತ್ತು ಬೆಂಬಲಿಗರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಸ್ಪರ್ಧೆ ಮಾಡಲಿದ್ದಾರೆ.
ಈ ಹಿಂದೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‍ನಲ್ಲಿದ್ದ ಅವರು ಶಾಸಕರಾಗಿ ಹಾಗೂ ಒಂದು ಬಾರಿ ಮಂಡ್ಯ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಟಿ ರವಿ, ಸಚಿವರಾದ ಸುಧಾಕರ್, ಗೋಪಾಲಯ್ಯ ಮೊದಲಾದ ನಾಯಕರು ಉಪಸ್ಥಿತರಿದ್ದರು.