ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಕಾಡಾನೆ ದಾಳಿಯಿಂದಾಗಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಇದೀಗ ನಡೆದಿರುವ ಮತ್ತೊಂದು ಘಟನೆಯಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಎಂಬ ಗ್ರಾಮದ ಬಳಿ, ಕಾಡಾನೆಯೊಂದು ದಾಳಿ ನಡೆಸಿದ್ದು, ಆ ಘಟನೆಯಲ್ಲಿ ಸೋಮ್ಲಾಪುರದ ನಿವಾಸಿಯಾದ ಕವನ (17) ಎಂಬ ಬಾಲಕಿ ಮೃತಪಟ್ಟಿದ್ದಾಳೆ.
ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದ ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿಂದ ದೂರಕ್ಕೆ ಎಸೆದಿದೆ. ಇದರ ಪರಿಣಾವಾಗಿ ಆಕೆ ಸಾವನ್ನಪ್ಪಿದ್ದಾಳೆ.
ಗಾಯಗೊಂಡಿರುವ ಮಂಜುಳಾರನ್ನು ದಾವಣಗೆರೆಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕವನಾಳ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಅವರ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.
ಸೋಮ್ಲಾಪುರ ಹಾಗೂ ಅದರ ಸಮೀಪವಿರುವ ಕಾಶೀಪುರದ ಸುತ್ತಮುತ್ತ ಶನಿವಾರ ಮುಂಜಾನೆ ಆನೆಯು ಓಡಾಡಿದೆ. ಇದು ಗ್ರಾಮಸ್ಥರಿಗೆ ಗೊತ್ತಾಗಿರಲಿಲ್ಲ. ಕವನ ಹಾಗೂ ಆಕೆಯ ಜೊತೆಗೆ ಅವರ ತಾಯಿ ಮಂಜುಳಾ (47) ಎಂಬ ಮಹಿಳೆ, ಜಮೀನಿಗೆ ಅವರೇಕಾಯಿ ಬಿಡಿಸಲು ಹೋಗಿದ್ದರು. ಆಗ, ಆನೆಯು ಇವರ ಮೇಲೆ ದಾಳಿ ನಡೆಸಿದೆ.
ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ
ಘಟನೆ ನಡೆದಿರುವ ಸೋಮ್ಲಾಪುರ, ಕಾಶೀಪುರ, ಸೂಳೆಕೆರೆ ಹಾಗೂ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಕಾಡಾನೆ ಭೀತಿಗೆ ಒಳಗಾಗಿದ್ದಾರೆ.