ಕರ್ನಾಟಕ ವಿಧಾನಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಾಗ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಬೇಕೆಂದು ಎಎಪಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷ ಬಯಸಿದ್ದು, ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಲು ವಿಳಂಬ ಮಾಡಲಾಗುತ್ತಿದೆ. ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕರೆ ಚುನಾವಣೆಯಲ್ಲಿ ರಾಜ್ಯದಾದ್ಯಂತ ಪ್ರಚಾರ ಮತ್ತು ಬೆಂಬಲವನ್ನು ಕ್ರೋಢೀಕರಿಸಲು ಸಹಾಯವಾಗುತ್ತದೆ ಎಂದು ಎಎಪಿ ಹೇಳಿದೆ.
ರಾಷ್ಟ್ರೀಯ ಪಕ್ಷವಾಗಲು ಬೇಕಾದ ಎಲ್ಲಾ ಮಾನದಂಡಗಳು ನಮ್ಮ ಪಕ್ಷಕ್ಕೆ ಇದೆ, ಆದರೆ ಭಾರತೀಯ ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನಿರಾಕರಿಸಿದೆ ಎಂದು ಎಎಪಿ ಕರ್ನಾಟಕ ಸಂಚಾಲಕ ಪೃಥ್ವಿ ರೆಡ್ಡಿ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಸಾರ್ವತ್ರಿಕ ಚುನಾವಣೆ ಅಥವಾ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕನಿಷ್ಠ 6 % ಮಾನ್ಯವಾದ ಮತಗಳನ್ನು ಪಡೆದುಕೊಂಡರೆ ಮತ್ತು ಲೋಕಸಭೆಯಲ್ಲಿ ಕನಿಷ್ಠ ನಾಲ್ಕು ಸ್ಥಾನಗಳನ್ನು ಗೆದ್ದರೆ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಬಹುದು.
ದೆಹಲಿ, ಪಂಜಾಬ್, ಗೋವಾ ಮತ್ತು ಗುಜರಾತ್‌ನಲ್ಲಿ ಕಳೆದ ಚುನಾವಣೆಗಳಲ್ಲಿ ಪಕ್ಷವು ಇದನ್ನು ಸಾಧಿಸಿ ತೋರಿಸಿದೆ ಎಂದು ಎಎಪಿ ಹೇಳಿದೆ.