ಬೆಂಗಳೂರು : ಪಂಚ ಗ್ಯಾರಂಟಿ (Guarantee schemes).. ಕರ್ನಾಟಕದಲ್ಲಿ (Karnataka) ಕಾಂಗ್ರೆಸ್ (Congress party) ಅಧಿಕಾರ ಹಿಡಿಯಲು ಬುನಾದಿ ಹಾಕಿದ್ದ ಅಜೆಂಡಾ ಇದು. 2023ರ ಚುನಾವಣಾ ಅಖಾಡದಲ್ಲಿದ್ದ ಬಿಜೆಪಿ ಸರ್ಕಾರ ವಿರುದ್ಧ 40 ಪರ್ಸೇಂಟ್ ಕಮಿಷನ್ ಬಾಂಬ್ ಜೊತೆಗೆ ಮತದಾರರಿಗೆ ಬಣ್ಣಬಣ್ಣದ ಗ್ಯಾರಂಟಿಗಳ ಕಾಮನ ಬಿಲ್ಲು ತೋರಿಸಿದ್ದ ಕಾಂಗ್ರೆಸ್, ದಾಖಲೆಯ ಸ್ಥಾನ ಪಡೆದು ಅಧಿಕಾರ ಹಿಡಿದಿತ್ತು. ಇದೀಗ ಇದೇ ಗ್ಯಾರಂಟಿ ಕಾಂಗ್ರೆಸ್ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಇದ್ರ ಮಧ್ಯೆ ಒಂದು ಯೋಜನೆ ಹಳ್ಳ ಹಿಡಿಯೋ ಲಕ್ಷಣ ಕಾಣಿಸುತ್ತಿದೆ.
ನಂಗೂ ಫ್ರೀ.. ನಿಂಗೂ ಫ್ರೀ.. ಎನ್ನುತ್ತಲೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದು ಎರಡೂವರೆ ವರ್ಷ ಕಳೆದಿದೆ. ಇದೀಗ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರಿಂದಲೇ ಅಪಸ್ವರ ಕೇಳಿ ಬರ್ತಿದೆ. ನಿರುದ್ಯೋಗಿ ಪದವೀಧರರು ಮತ್ತು ಡಿಪ್ಲೊಮಾ ಪದವಿ ಪಡೆದವರಿಗೆ ಆರ್ಥಿಕ ನೆರವು ನೀಡುವ ರಾಜ್ಯ ಸರ್ಕಾರದ ಐದು ಖಾತರಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆಯಡಿಯಲ್ಲಿ ಸುಮಾರು ಮೂರು ಲಕ್ಷ ಫಲಾನುಭವಿಗಳಿದ್ದರೂ, ಉದ್ಯೋಗ ಪಡೆಯಲು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಫಲಾನುಭವಿಗಳು ಆಸಕ್ತಿ ತೋರುತ್ತಿಲ್ಲ.
ಇದನ್ನೂ ಓದಿ : ಗೃಹಲಕ್ಷ್ಮಿ ಹಣದ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಚಿವೆ ಹೆಬ್ಬಾಳ್ಕರ್!
ಶೇಕಡಾ 90 ರಷ್ಟು ಜನರು ಯುವ ನಿಧಿ ಪ್ಲಸ್ ಯೋಜನೆಗೆ ನೋಂದಾಯಿಸಿಕೊಂಡಿಲ್ಲ. ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಪದವೀಧರರು ವಿವಿಧ ಸಂಸ್ಥೆಗಳಲ್ಲಿ ತರಬೇತಿ ಕಾರ್ಯಕ್ರಮಗಳ ಮೂಲಕ ಉಚಿತವಾಗಿ ಉದ್ಯೋಗಗಳಿಗೆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಯಾವ ಕೋರ್ಸಿನ ಎಷ್ಟು ಜನರ ನೋಂದಣಿ?
ಸುಮಾರು 3,79,000 ವಿದ್ಯಾರ್ಥಿಗಳು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಅವರಲ್ಲಿ 2,98,000 ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಒಟ್ಟು 3,79,000 ವಿದ್ಯಾರ್ಥಿಗಳಲ್ಲಿ, 47,000 ಕ್ಕೂ ಹೆಚ್ಚು ನಿರುದ್ಯೋಗಿ ಅಭ್ಯರ್ಥಿಗಳು, ಅಥವಾ ಶೇಕಡಾ 13 ರಷ್ಟು ಜನರು ಎಂಜಿನಿಯರಿಂಗ್ ಪದವೀಧರರು. ಸುಮಾರು 3,00,214 ವಿದ್ಯಾರ್ಥಿಗಳು ಕಲೆ, ವಿಜ್ಞಾನ, ವಾಣಿಜ್ಯ, ನಿರ್ವಹಣೆ ಮತ್ತು ಇತರ ವಿಭಾಗಗಳಿಂದ ಬಂದಿದ್ದರೆ, 27,843 ವಿದ್ಯಾರ್ಥಿಗಳು ಎಂಜಿನಿಯರಿಂಗ್ ಅಲ್ಲದ ಸ್ನಾತಕೋತ್ತರ ಪದವೀಧರರು.
ಉದ್ಯೋಗ ಪಡೆದವರಲ್ಲಿ ದಕ್ಷಿಣ ಕನ್ನಡ ನಂಬರ್ ಒನ್
ಯುವನಿಧಿ ಯೋಜನೆಯ ಯುವ ನಿಧಿ ಪ್ಲಸ್ ಕಾರ್ಯಕ್ರಮದಡಿ ಉಚಿತ ಕೌಶಲ್ಯ ತರಬೇತಿ ಪಡೆದು ಉದ್ಯೋಗ ಪಡೆದುಕೊಂಡ 2,326 ಮಂದಿ ಪೈಕಿ ಅತಿ ಹೆಚ್ಚು ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಜಿಲ್ಲೆಯಲ್ಲಿ 463 ಮಂದಿ ಉದ್ಯೋಗ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಮೈಸೂರು 329, ಮಂಡ್ಯ 223, ಹಾಸನ 197, ಬೆಂಗಳೂರು ನಗರ 191 ಮಂದಿಗೆ ಕೆಲಸ ಸಿಕ್ಕಿದೆ.
ನೋಂದಣಿ ಮಾಡಿಸಿಕೊಂಡವರೆಷ್ಟು?
ಸುಮಾರು 2,98,000 ಪದವೀಧರರು ಮತ್ತು ಡಿಪ್ಲೊಮಾ ಪಡೆದವರು ಯುವ ನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಸರ್ಕಾರವು ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡುವ ಕೌಶಲ್ಯ ಆಧಾರಿತ ತರಬೇತಿಯನ್ನು ನೀಡಲು ಬಯಸುತ್ತದೆ. ಆದರೂ, ಅವರಲ್ಲಿ ಯಾರೂ ನೋಂದಾಯಿಸಲು ಮತ್ತು ತರಬೇತಿಯನ್ನು ಪಡೆಯಲು ಮುಂದೆ ಬಂದಿಲ್ವಂತೆ.
ಏನಿದು ಯುವ ನಿಧಿ ಯೋಜನೆ?
ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಇದೂ ಒಂದು. ರಾಜ್ಯದ ಪದವೀಧರರಿಗೆ ಮಾಸಿಕ 3 ಸಾವಿರ ರೂಪಾಯಿ ಹಾಗೂ ಡಿಪ್ಲೋಮಾ ಪಡೆದವರಿಗೆ ಮಾಸಿಕ 1500 ರೂಪಾಯಿಯನ್ನು ಸರ್ಕಾರ ನೀಡಲಿದೆ. ಇದನ್ನು ಗರಿಷ್ಠ 2 ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನೀಡಲಾಗುವುದು.