ಬೆಂಗಳೂರು : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿರುದ್ಧ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಕ್ಕುಚ್ಯುತಿ ನೋಟಿಸ್ ನೀಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶಿಕಾರಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರ ಶಿಫಾರಸಿನ ಮೇರೆಗೆ ನಾಮ ನಿರ್ದೇಶನ ಮಾಡುವಂತೆ ಸಚಿವ ಮಧು ಬಂಗಾರಪ್ಪ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದರು.
ಇದರಿಂದ ಸಿಟ್ಟಾದ ಬಿ ವೈ ವಿಜಯೇಂದ್ರ, ಮಧು ಬಂಗಾರಪ್ಪ ಅವರ ಈ ನಿರ್ಧಾರದಿಂದ ನನ್ನ ಹಕ್ಕುಚ್ಯುತಿಯಾಗಿದೆ. ಯಾವುದೇ ಕ್ಷೇತ್ರದಲ್ಲಿ ಇಂಥ ನಾಮ ನಿರ್ದೇಶನ ಮಾಡುವಾಗ ಸ್ಥಳೀಯ ಶಾಸಕರ ಅಭಿಪ್ರಾಯ ಕೇಳಬೇಕು, ಆದರೆ ಅವರು ಯಾವುದೇ ರೀತಿಯ ಚರ್ಚೆ ನಡೆಸದೆ ನಾಮ ನಿರ್ದೇಶನ ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಇದು ವಿಧಾನಸಭೆ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ – 192 ಗೆ ವಿರುದ್ಧವಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ ಅವರಿಗೆ ಸೂಚನಾ ಪತ್ರ ನೀಡಿದ್ದರು, ಜೊತೆಗೆ ಮಧು ಬಂಗಾರಪ್ಪಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದರು. ಹಾಗೂ ಸದನದಲ್ಲಿ ಹಕ್ಕು ಪತ್ರ ಮಂಡನೆಗೆ ವಿಜಯೇಂದ್ರ ಕೋರಿದ್ದರು.
ಒಂದು ವೇಳೆ ಹಕ್ಕು ಪತ್ರ ಮಂಡನೆಗೆ ಅವಕಾಶ ಮತ್ತೊಂದು ಕೋಲಾಹಲ ಉಂಟಾಗುವ ಸಾಧ್ಯತೆ ಎಂದು ಅರಿತ ಸ್ಪೀಕರ್, ವಿಜಯೇಂದ್ರ ಹಾಗೂ ಮಧು ಬಂಗಾರಪ್ಪ ಅವರಿಬ್ಬರನ್ನು ಕರೆದು ಚರ್ಚಿಸಿ, ಇನ್ನೂ ಮುಂದೆ ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸಿ ನೇಮಕ ಪ್ರತಿಕ್ರಿಯೆ ನಡೆಸದಂತೆ ಆದೇಶಿಸಿದ್ದಾರೆ.