ಈಜಿಪ್ಟ್ : ಅರ್ಜೆಂಟೀನಾ ವಿರುದ್ಧ ನಡೆದ ಫಿಫಾ ವಿಶ್ವಕಪ್‌ನ (FIFA World Cup) ರೋಚಕ ಹಾಗೂ ವಿವಾದಾತ್ಮಕ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈಜಿಪ್ಟ್ ತಂಡವು 2-3 ಗೋಲುಗಳ ಅಂತರದಿಂದ ಸೋತು ಹೊರಬಿದ್ದಿದೆ. ಈ ಆಘಾತಕಾರಿ ಸೋಲಿನ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಈಜಿಪ್ಟ್ ತಂಡದ ಮುಖ್ಯ ತರಬೇತುದಾರ್ ಹೊಸಾಮ್ ಹಸನ್, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ‘ಫೇರ್ ಪ್ಲೇ’ ಆಗಿಲ್ಲ ಎಂದು ಆರೋಪಿಸಿದ್ದು, ಟೂರ್ನಿಯ ಉಳಿದ ಪಂದ್ಯಗಳನ್ನು ತಾವು ವೈಯಕ್ತಿಕವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.
3-2 ಅಂತರದಲ್ಲಿ ಸೋತಿದ್ದ ಈಜಿಪ್ಟ್
ಅಟ್ಲಾಂಟಾದಲ್ಲಿ ನಡೆದ ಈ ಪಂದ್ಯದಲ್ಲಿ ಈಜಿಪ್ಟ್ ತಂಡವು ವಿಶ್ವ ಚಾಂಪಿಯನ್ ಅರ್ಜೆಂಟೀನಾಗೆ ಆರಂಭದಲ್ಲೇ ಶಾಕ್ ನೀಡಿತ್ತು. ಪಂದ್ಯದ 15ನೇ ನಿಮಿಷದಲ್ಲಿ ಯಾಸರ್ ಇಬ್ರಾಹಿಂ ಹೆಡರ್ ಮೂಲಕ ಮೊದಲ ಗೋಲು ಗಳಿಸಿದರೆ, 67ನೇ ನಿಮಿಷದಲ್ಲಿ ಮೊಸ್ತಫಾ ಜಿಕೊ ಮತ್ತೊಂದು ಗೋಲು ಬಾರಿಸಿ ಈಜಿಪ್ಟ್ ಕೈಯನ್ನು ಬಲಪಡಿಸಿದ್ದರು. ಆದರೆ ಪಂದ್ಯ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಅರ್ಜೆಂಟೀನಾ ಅದ್ಭುತವಾಗಿ ಪುಟಿದೆದ್ದಿತು. 79ನೇ ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಮತ್ತು 83ನೇ ನಿಮಿಷದಲ್ಲಿ ದಂತಕಥೆ ಲಿಯೋನೆಲ್ ಮೆಸ್ಸಿ ತಲಾ ಒಂದು ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಅಂತಿಮವಾಗಿ ಇಂಜುರಿ ಟೈಮ್‌ನಲ್ಲಿ ಎಂಜೊ ಫೆರ್ನಾಂಡಿಸ್ ಜಯದ ಗೋಲು ಬಾರಿಸುವ ಮೂಲಕ ಅರ್ಜೆಂಟೀನಾಗೆ 3-2 ಅಂತರದ ರೋಚಕ ಜಯ ತಂದುಕೊಟ್ಟರು.
ಪಂದ್ಯ ಮುಗಿದ ನಂತರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಈಜಿಪ್ಟ್ ಕೋಚ್ ಹೊಸಾಮ್ ಹಸನ್, ತಮ್ಮ ತಂಡಕ್ಕೆ ಅನ್ಯಾಯವಾಗಿದೆ ಎಂದು ಮಾಧ್ಯಮಗಳ ಮುಂದೆ ಗುಡುಗಿದ್ದಾರೆ. “ಅರ್ಜೆಂಟೀನಾದ ಈ ಗೆಲುವು ಸಂಪೂರ್ಣವಾಗಿ ಅನರ್ಹವಾದದ್ದು. ನಾನು ಇಂದೇ ದೇಶಕ್ಕೆ ಹಿಂತಿರುಗಲಿದ್ದು, ಈ ವಿಶ್ವಕಪ್‌ನ ಯಾವುದೇ ಪಂದ್ಯವನ್ನು ಇನ್ನು ಮುಂದೆ ನೋಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಏಕೆಂದರೆ ಇಲ್ಲಿ ಯಾವುದೇ ನ್ಯಾಯ ಉಳಿದಿಲ್ಲ. ಫಿಫಾ ಮಾತನಾಡುವ ‘ಫೇರ್ ಪ್ಲೇ’ ಮತ್ತು ಗೌರವಕ್ಕೂ ಇಂದಿನ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ನಾವು ಗೌರವದಿಂದಲೇ ಟೂರ್ನಿಯಿಂದ ಹೊರನಡೆದಿದ್ದೇವೆ, ಆದರೆ ಇಂದಿನ ಫಲಿತಾಂಶದ ಮೇಲೆ ಹೊರಗಿನ ಪ್ರಭಾವ ಹೆಚ್ಚಾಗಿತ್ತು ಎಂದು ಅವರು ದೂರಿದ್ದಾರೆ.
ಗಂಭೀರ ಆರೋಪ ಮಾಡಿದ ಕೋಚ್
ಮುಂದುವರಿದು ಮಾತನಾಡಿದ ಹಸನ್, ವಿಎಆರ್ (VAR) ತಂತ್ರಜ್ಞಾನದ ನಿರ್ಧಾರಗಳು ಸೇರಿದಂತೆ ಮೈದಾನದ ಒಳಗೆ ಮತ್ತು ಹೊರಗಿನ ಹಲವು ಅಂಶಗಳು ಪಂದ್ಯದ ಫಲಿತಾಂಶವನ್ನು ಬದಲಾಯಿಸಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾವು ಹಾಲಿ ವಿಶ್ವ ಚಾಂಪಿಯನ್‌ಗಳಿಗಿಂತ ಎಲ್ಲ ವಿಚಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದೆವು. ಆದರೆ ವಿಶ್ವ ಚಾಂಪಿಯನ್ ತಂಡವನ್ನು ಟೂರ್ನಿಯಲ್ಲಿ ಉಳಿಸಿಕೊಳ್ಳಲು ಹಾಗೂ ಲಿಯೋನೆಲ್ ಮೆಸ್ಸಿ ಅವರ ಕಪ್ ಗೆಲ್ಲುವ ರೇಸ್ ಮುಂದುವರಿಯುವಂತೆ ಮಾಡಲು ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತೇ ಎಂಬ ಅನುಮಾನ ಮೂಡುತ್ತಿದೆ. ಫುಟ್‌ಬಾಲ್‌ನಲ್ಲಿ ಕೆಲವೊಮ್ಮೆ ಆಟದ ತಾಂತ್ರಿಕತೆಗಿಂತ ಮೀರಿದ ಬಾಹ್ಯ ಶಕ್ತಿಗಳು ಕೆಲಸ ಮಾಡುತ್ತವೆ, ವಿಶ್ವ ಚಾಂಪಿಯನ್ ತಂಡಕ್ಕೆ ಎಲ್ಲಾ ಹಂತದಲ್ಲೂ ಬೆಂಬಲ ಸಿಕ್ಕಿದೆ ಎಂದು ಹಸನ್ ನೇರವಾಗಿಯೇ ಪಕ್ಷಪಾತದ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : ಫಿಫಾ ಪುಟ್ ಬಾಲ್ ವರ್ಲ್ಡ್ ಕಪ್ ಮೇಲೆ ಟ್ರಂಪ್ ಪ್ರಭಾವ – ರೊಚ್ಚಿಗೆದ್ದ ಕ್ರೀಡಾಭಿಮಾನಿಗಳು!