ಕಾನ್ಪುರ: ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಹೆತ್ತ ತಂದೆಯೇ (Father) ತನ್ನ 11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು (Childrens) ಕ್ರೂರವಾಗಿ ಕತ್ತು ಸೀಳಿ ಹತ್ಯೆ (Murder) ಮಾಡಿದ್ದಾನೆ.
ಬಿಹಾರ ಮೂಲದ ಶಶಿ ರಂಜನ್ ಮಿಶ್ರಾ (48) ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ. ಈತ ವೃತ್ತಿಯಲ್ಲಿ ಮೆಡಿಕಲ್ ರೆಪ್ ಆಗಿದ್ದು, ತನ್ನ ಪತ್ನಿ ರೇಷ್ಮಾ ಹಾಗೂ ಅವಳಿ ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಅವರೊಂದಿಗೆ ಕಾನ್ಪುರದಲ್ಲಿ ವಾಸವಾಗಿದ್ದನು. ಭಾನುವಾರ ಮುಂಜಾನೆ ಈತ ತನ್ನ ಇಬ್ಬರು ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಆರೋಪಿ ಶಶಿ ರಂಜನ್ ತನ್ನ ಪತ್ನಿಯ ನಡತೆಯ ಬಗ್ಗೆ ಸಂಶಯ ಹೊಂದಿದ್ದ ಎನ್ನಲಾಗಿದೆ. ಪತ್ನಿ ರೇಷ್ಮಾ ಮತ್ತು ಮಕ್ಕಳ ಮೇಲೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡುತ್ತಿದ್ದನು. ಶನಿವಾರ ರಾತ್ರಿ ಊಟದ ನಂತರ ಮಕ್ಕಳನ್ನು ಮಲಗಿಸಲೆಂದು ತನ್ನ ಕೋಣೆಗೆ ಕರೆದೊಯ್ದಿದ್ದನು. ತಡರಾತ್ರಿ ಸುಮಾರು 2:30ಕ್ಕೆ ಒಬ್ಬ ಮಗಳನ್ನು ಶೌಚಾಲಯಕ್ಕೆ ಕರೆದೊಯ್ದು ನಂತರ ಇಬ್ಬರನ್ನೂ ಕೊಲೆ ಮಾಡಿದ್ದಾನೆ. ಪತ್ನಿ ನೀಡಿದ ದೂರಿನ ಪ್ರಕಾರ, ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.
ಮಕ್ಕಳನ್ನು ಕೊಂದ ಎರಡು ಗಂಟೆಗಳ ನಂತರ, ಆರೋಪಿ ಶಶಿ ರಂಜನ್ ತಾನೇ ಪೊಲೀಸರಿಗೆ ಕರೆ ಮಾಡಿ ಮಕ್ಕಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳ ಶವಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ರೇಷ್ಮಾ ಮತ್ತು ಶಶಿ ರಂಜನ್ 2014 ರಲ್ಲಿ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಸೂರತ್‌ನ ಉಧ್ನಾ ನಿಲ್ದಾಣದಲ್ಲಿ ನೂಕುನುಗ್ಗಲು : ಪ್ರಯಾಣಿಕರ ನಿಯಂತ್ರಿಸಲು ಲಾಠಿ ಚಾರ್ಜ್!- VIDEO