Wednesday, August 19, 2026
Homeಟಾಪ್ ನ್ಯೂಸ್R ASHOK: ಚಾಮರಾಜನಗರದಲ್ಲಿ ರೈತರ ಆಕ್ರೋಶ: ವಿಪಕ್ಷ ನಾಯಕ ಆರ್. ಅಶೋಕ್ ಕಾರಿಗೆ ಘೇರಾವ್!

R ASHOK: ಚಾಮರಾಜನಗರದಲ್ಲಿ ರೈತರ ಆಕ್ರೋಶ: ವಿಪಕ್ಷ ನಾಯಕ ಆರ್. ಅಶೋಕ್ ಕಾರಿಗೆ ಘೇರಾವ್!

ಚಾಮರಾಜನಗರ: ಜಿಲ್ಲೆಗೆ ಆಗಮಿಸಿದ್ದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (‌R Ashok) ಅವರಿಗೆ ಇಲ್ಲಿನ ರೈತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಕೇವಲ ಎಸ್‌ಐಆರ್ (SIR) ವಿಚಾರದ ಬಗ್ಗೆ ಮಾತನಾಡಲು ಮಾತ್ರ ಚಾಮರಾಜನಗರಕ್ಕೆ ಬಂದಿದ್ದೀರಾ? ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದೆ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಇಲ್ಲಿ ಬರ ಅಧ್ಯಯನ ನಡೆಸಿಲ್ಲ ಎಂದು ರೈತರು ತೀವ್ರ ಅಸಮಾಧಾನ ಹೊರಹಾಕಿದರು.

ರಾಜ್ಯ ಸರ್ಕಾರಕ್ಕೆ ಕಣ್ಣು ತೆರೆಸುವಂತಹ ಕೆಲಸ ಮಾಡಬೇಕು
ಅಶೋಕ್ ಅವರ ವಾಹನವನ್ನು ತಡೆದು ನಿಲ್ಲಿಸಿದ ರೈತ ಮುಖಂಡರು, “ವಿರೋಧ ಪಕ್ಷದ ನಾಯಕರಾಗಿ ನೀವು ರಾಜ್ಯ ಸರ್ಕಾರಕ್ಕೆ ಕಣ್ಣು ತೆರೆಸುವಂತಹ ಕೆಲಸ ಮಾಡಬೇಕು. ಬಿಜೆಪಿಯ ಸಂಸದರು ತಕ್ಷಣವೇ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ಮಾಹಿತಿ ಮುಟ್ಟಿಸಬೇಕು” ಎಂದು ತರಾಟೆಗೆ ತೆಗೆದುಕೊಂಡರು. ರೈತರ ಹಠಾತ್ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ವಿಪಕ್ಷ ನಾಯಕ ಆರ್. ಅಶೋಕ್, ರೈತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕೇಂದ್ರ ಮೇಲೆ ಗೂಬೆ ಕೂರಿಸುವ ಯತ್ನ

ಇನ್ನು ಚಾಮರಾಜನಗರದಲ್ಲಿ ರಾಜ್ಯದಲ್ಲಿ ಬರದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಆರ್‌ ಅಶೋಕ್, ಈ ವೇಳೆಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳನ್ನು ಬರಗಾಲ ಘೋಷಣೆ ಮಾಡಬೇಕಿತ್ತು. ಅದನ್ನು ಬಿಟ್ಟು ಕೇಂದ್ರ ಸರ್ಕಾರ 10,000 ಕೋಟಿ ರೂ. ಕೊಡಬೇಕೆಂದು ಕೆಪಿಸಿಸಿ ಸಭೆಯಲ್ಲಿ ನಿರ್ಣಯ ಮಾಡಿದ್ದಾರೆ. ಸಮೀಕ್ಷೆ ಮಾಡಿಲ್ಲ, ಬರ ಘೋಷಿಸಿಲ್ಲ, ಮೇವು, ನೀರು ಎಷ್ಟಿದೆ ಎಂದು ಹೇಳಿಲ್ಲ, ಆದರೂ ಕೇಂದ್ರದಿಂದ ಹಣ ನೀಡಬೇಕೆಂದು ಹೇಳುತ್ತಿದ್ದಾರೆ. ಜವಾಬ್ದಾರಿಯುತ ಸರ್ಕಾರ ಮೊದಲು ಸಮೀಕ್ಷೆ ಮಾಡಿ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದರೆ ಮಾತ್ರ ಪರಿಹಾರ ನೀಡಲಾಗುತ್ತದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳ ತಂಡವನ್ನು ಕಳುಹಿಸಿ ಸಮೀಕ್ಷೆ ಮಾಡಿ ವರದಿ ಪಡೆದು ನಂತರ ಹಣ ಬಿಡುಗಡೆ ಮಾಡುತ್ತದೆ. ಪ್ರತಿ ವರ್ಷ ಎಸ್‌ಡಿಆರ್‌ಎಫ್‌ನಲ್ಲಿ ಪರಿಹಾರ ಬರುತ್ತದೆ. ಆ ಹಣವನ್ನು ಏನು ಮಾಡಲಾಗಿದೆ ಎಂದು ಸರ್ಕಾರ ಲೆಕ್ಕ ನೀಡಬೇಕು. ಅದನ್ನು ಬಿಟ್ಟು ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಆಗಸ್ಟ್‌ 6ರಿಂದ ಮುಂಗಾರು ಅಧಿವೇಶನ ಆರಂಭ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಹೆಚ್ಚಿನ ಸುದ್ದಿ

Change Language »
error: Content is protected !!