ಮುಂಬೈ : ಭಾರತೀಯ ಚಿತ್ರರಂಗದ (Bollywood) ದೈತ್ಯ ಪ್ರತಿಭೆ, ‘ಘಜಿನಿ’ ಹಾಗೂ ‘ಲಗಾನ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ಪ್ರದೀಪ್ ರಾವತ್ ( Pradeep Rawat) (74) (Pradeep Rawat) ಮುಂಬೈನಲ್ಲಿ (Mumbai) ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ‘ಲಗಾನ್’ ಸಿನಿಮಾದಲ್ಲಿ ಅವರೊಂದಿಗೆ ನಟಿಸಿದ್ದ ಸಹನಟ ಯಶ್‌ಪಾಲ್ ಶರ್ಮಾ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಈ ದುಃಖದ ಸುದ್ದಿಯನ್ನು ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ಬಿ.ಆರ್. ಚೋಪ್ರಾ ಅವರ ಐತಿಹಾಸಿಕ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಅಶ್ವತ್ಥಾಮ’ ಪಾತ್ರದ ಮೂಲಕ ತಮ್ಮ ನಟನಾ ಪಯಣದಲ್ಲಿ ದೊಡ್ಡ ಹೆಸರು ಮಾಡಿದ ಪ್ರದೀಪ್ ರಾವತ್, ತರುವಾಯ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವಿ ಖಳನಟರಾಗಿ ಹೊರಹೊಮ್ಮಿದರು. ಆಮಿರ್ ಖಾನ್ ಅಭಿನಯದ ‘ಲಗಾನ್’ ಸಿನಿಮಾದಲ್ಲಿ ‘ದೇವಾ’ ಎಂಬ ವಿಶಿಷ್ಟ ಪಾತ್ರದಲ್ಲಿ ಗಮನ ಸೆಳೆದಿದ್ದ ಇವರು, ತಮಿಳು ಹಾಗೂ ಹಿಂದಿಯ ‘ಘಜಿನಿ’ ಸಿನಿಮಾದಲ್ಲಿ ಕ್ರೂರ ಖಳನಟನಾಗಿ ದೇಶಾದ್ಯಂತ ಮನೆಮಾತಾಗಿದ್ದರು. ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಸೈ’ ತೆಲುಗು ಸಿನಿಮಾದಲ್ಲಿನ ‘ಭಿಕ್ಷು ಯಾದವ್’ ಪಾತ್ರದ ಅದ್ಭುತ ಅಭಿನಯಕ್ಕಾಗಿ ಅತ್ಯುತ್ತಮ ಖಳನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದರು.
ಕೇವಲ ಬಾಲಿವುಡ್ ಅಥವಾ ದಕ್ಷಿಣ ಭಾರತಕ್ಕೆ ಸೀಮಿತವಾಗದೆ ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯರಾಗಿದ್ದರು. ಸ್ಯಾಂಡಲ್‌ವುಡ್‌ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ರಾವತ್, ದರ್ಶನ್ ಅಭಿನಯದ ‘ಗಜ’, ‘ಅಭಯ್’, ಸುದೀಪ್ ಅಭಿನಯದ ‘ಬಚ್ಚನ್’ ಹಾಗೂ ‘ಪರೋಡಿ’ ಮುಂತಾದ ಸೂಪರ್ ಹಿಟ್ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ.
ತೆರೆಯ ಮೇಲೆ ಭೀಕರ ಹಾಗೂ ಭಯಾನಕ ಖಳನಟನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರದೀಪ್ ರಾವತ್, ನಿಜ ಜೀವನದಲ್ಲಿ ಅತ್ಯಂತ ಸರಳ ಹಾಗೂ ನಮ್ರ ಸ್ವಭಾವದ ವ್ಯಕ್ತಿಯಾಗಿದ್ದರು. ಅವರ ನಿಧನದಿಂದ ಭಾರತೀಯ ಚಿತ್ರರಂಗ ಒಬ್ಬ ಶ್ರೇಷ್ಠ ಕಲಾವಿದನನ್ನು ಕಳೆದುಕೊಂಡಂತಾಗಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಬಂಧುಗಳು ಮೃತರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ಇನ್ನು Google Payನೇ ಹೇಳುತ್ತೆ ನಿಮ್ಮ ಹಣ ಎಲ್ಲಿಗೆ ಖರ್ಚಾಗುತ್ತೆ ಅಂತ – ಹೊಸ AI ಫೀಚರ್ ಲಾಂಚ್!