ಹೊಲದ ನಡುವೆ ಇದ್ದ ಕೃಷಿ ಹೊಂಡದಲ್ಲಿ ಇಬ್ಬರು ಬಾಲಕರು ಮುಳುಗಿ ಸಾವನ್ನಪ್ಪಿರುವ ಘಟನೆ ಹುಕ್ಕೇರಿಯ ಯಾದಗೋಡ ಗ್ರಾಮದಲ್ಲಿ ಭಾನುವಾರ ನಡೆದಿದೆ. ಯಶು ಬಸಪ್ಪ (14) ಹಾಗೂ ಯಮುನಪ್ಪ ಪ್ರಕಾಶ್ (10) ಮೃತ ಬಾಲಕರು.
ಕ್ರಿಕೆಟ್ ಆಡಲು ಹೋಗುವುದಾಗಿ ಹೇಳಿ ಇಬ್ಬರೂ ಬಾಲಕರು ಜಮೀನಿನಲ್ಲಿದ್ದ ಕೃಷಿ ಹೊಂಡದ ಬಳಿ ತೆರಳಿದ್ದರು. ಈ ವೇಳೆ ಯಮುನಪ್ಪ ಹೊಂಡದಲ್ಲಿ ಬಿದ್ದಿದ್ದ. ಅವನಿಗೆ ನೆರವಾಗಲೆಂದು ಯಶು ಬಸಪ್ಪ ತಾನೂ ನೀರಿಗಿಳಿದಿದ್ದ. ಆದರೆ ಇಬ್ಬರಿಗೂ ಈಜು ಬರುತ್ತಿರಲಿಲ್ಲ. ಇಬ್ಬರೂ ಬಾಲಕರು ಕೃಷಿ ಹೊಂಡದಲ್ಲೇ ಮುಳುಗಿ ಸಾವನ್ನಪ್ಪಿರುವುದು ಮೇಲ್ನೋಟಕ್ಕೇ ಖಚಿತವಾಗಿದೆ. ಸ್ಥಳಕ್ಕೆ ಹುಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.