ಭಾರತೀಯ ಜನತಾ ಪಕ್ಷದ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲ ನೂರು ಕ್ಷೇತ್ರಗಳ ಅಭ್ಯರ್ಥಿಗಳ ನಕಲಿ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ. ಕೇವಲ ಅಪಹಾಸ್ಯಕ್ಕಾಗಿ ಕಿಡಿಗೇಡಿಗಳು ಈ ಪಟ್ಟಿಯನ್ನು ರಚಿಸಿರುವ ಸಾಧ್ಯತೆ ಇದ್ದು, ಬಹುತೇಕ ಹಾಲಿ ಶಾಸಕರನ್ನು ಆಯಾಯಾ ಕ್ಷೇತ್ರದ ಅಭ್ಯರ್ಥಿಗಳಾಗಿ ಘೋಷಣೆ ಮಾಡಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಬಿಜೆಪಿ ಸೈಬರ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಈ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಎಂಬ ಸುಳ್ಳು ಸುದ್ದಿಯ ಕಾರ್ಖಾನೆ ಈ ಪಟ್ಟಿಯನ್ನು ಹರಿಬಿಟ್ಟಿದೆ ಎಂದು ಆರೋಪಿಸಿದ್ದಾರೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅರುಣ್ ಸಿಂಗ್ ಮಾಧ್ಯಮ ಪ್ರಕಟಣೆ ಹೊರಡಿಸಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.