ಚಾಮರಾಜನಗರ: ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಭಾರೀ ಮೊತ್ತದ ಮಾಲು ವಶಪಡಿಸಿಕೊಳ್ಳಲಾಗಿದೆ. ಯಳಂದೂರಿನಲ್ಲಿ ಪುಷ್ಪಲತಾ ಎಂಬುವರ ಒಡೆತನದಲ್ಲಿರುವ ಗುರುಕೃಪಾ ಎಂಬ ಬಾರ್ ಮೇಲೆ ದಾಳಿ ನಡೆಸಿ 8.23 ಲಕ್ಷ ರೂ. ಮೌಲ್ಯದ 1555 ಲೀ. ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯಾಯೋಚಿತ ರೀತಿಯಲ್ಲಿ ಚುನಾವಣೆ ನಡೆಸುವ ದೃಷ್ಟಿಯಿಂದ ಮದ್ಯದಂಗಡಿಗಳ ಮೇಲೆ ಅಬಕಾರಿ ಇಲಾಖೆ ಶಿಸ್ತು ಕ್ರಮಗಳನ್ನು ಹೆಚ್ಚಿಸಿತ್ತು.
ಅಬಕಾರಿ ಇಲಾಖೆಯ ಜಂಟಿ ಆಯುಕ್ತ ವಿಜಯ್ ಕುಮಾರ್ ಮತ್ತು ಉಪ ಆಯುಕ್ತ ನಾಗಶಯನ ನೇತೃತ್ವದಲ್ಲಿ ಬಂದೋಬಸ್ತ್ ಹೆಚ್ಚಿಸಲಾಗಿತ್ತು .
ಪ್ರತಿ ಪರವಾನಗಿದಾರರ ಮದ್ಯದಂಗಡಿಗಳನ್ನು ಪರಿಶೀಲನೆಗೊಳಪಡಿಸಿ ದಾಸ್ತಾನು, ಮಾರಾಟ ಹಾಗೂ ಖಾತೆಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ್ದರು.
40 ವರ್ಷದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು, ಕಾನೂನು ರೀತ್ಯಾ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 16 ಸ್ಥಳಗಳ ಮೇಲೆ ದಾಳಿ ನಡೆಸಿ 58 ಮಂದಿಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.