ಮೊದಲೆಲ್ಲ ಸಂಜೆ ಮಕ್ಕಳು ಶಾಲೆಯಿಂದ ಬಂದ ನಂತರ ಸ್ನ್ಯಾಕ್ಸ್ ಎಂದು ಕೊಡುತ್ತಿದ್ದದ್ದು ಬೆಳಗಿನ ಉಳಿದ ತಿಂಡಿ ಅಥವಾ ಅವಲಕ್ಕಿ ಹಾಗೂ ಮಂಡಕ್ಕಿಗಳನ್ನ ಮಾತ್ರ. ಈಗೆಲ್ಲಾ ಪಿಜ್ಜಾ, ಬರ್ಗರ್, ರೋಲ್ ಹೀಗೆಲ್ಲಾ ವೆರೈಟಿ ಬಂದಿದೆ. ಆದರೆ ಮೊದಲು ಹಸಿವು ನಿವಾರಣೆಗೆ ಮಂಡಕ್ಕಿ ಹಾಗೂ ಅವಲಕ್ಕಿಯೇ ಸಹಾಯಕ್ಕೆ ಬರುತ್ತಿತ್ತು. ಈ ಮಂಡಕ್ಕಿಗಳನ್ನ ಮಾಡುವುದರಲ್ಲಿ ಅನೇಕ ವಿಧಾನಗಳಿದೆ. ಇದನ್ನ ಬಳಸಿ ನಾನಾ ರೀತಿಯ ಚುರುಮುರಿಗಳನ್ನ ಮಾಡಬಹುದು. ನಾವು ಇವತ್ತು ನಿಮಗೆ ಸ್ಪೆಷಲ್ ನಿಪ್ಪಟ್ಟು ಚುರುಮುರಿ (Nippattu Churmuri Recipe) ಮಾಡುವುದು ಹೇಗೆ ಎಂದು ಹೇಳಿಕೊಡ್ತೀವಿ, ಇಲ್ಲಿದೆ ನೋಡಿ ಸೂಪರ್ ಈಸಿ, ಸಖತ್ ಟೇಸ್ಟಿ ರೆಸಿಪಿ.
ನಿಪ್ಪಟ್ಟು ಮಸಾಲಾ ಚುರುಮುರಿ ಮಾಡಲು ಬೇಕಾಗುವ ಸಾಮಾಗ್ರಿಗಳು
ನಿಪ್ಪಟ್ಟು: 3 (ಸಣ್ಣದು)
ಕ್ಯಾರೆಟ್: 1
ಟೊಮ್ಯಾಟೋ: 1
ಈರುಳ್ಳಿ: 1
ಶೇಂಗಾ: ಅರ್ಧ ಕಪ್
ಹಸಿರು ಬಟಾಣಿ: ಅರ್ಧ ಕಪ್ (ಬೇಯಿಸಿದ್ದು)
ಕೊತ್ತಂಬರಿ ಸೊಪ್ಪು: ಸ್ವಲ್ಪ (ಸಣ್ಣದಾಗಿ ಹೆಚ್ಚಿಕೊಂಡಿದ್ದು)
ಹಸಿ ಮೆಣಸು: 2
ಉಪ್ಪು : ರುಚಿಗೆ ತಕ್ಕಷ್ಟು
ಮಂಡಕ್ಕಿ: 3 ಕಪ್
ಎಣ್ಣೆ
ಇದನ್ನೂ ಓದಿ: ಸೂಪರ್ ಆರೋಗ್ಯಕರ ಮಖಾನಾ ಸ್ನ್ಯಾಕ್ಸ್ ರೆಸಿಪಿ ಇಲ್ಲಿದೆ
ನಿಪ್ಪಟ್ಟು ಮಸಾಲಾ ಚುರುಮುರಿ ಮಾಡುವ ಸುಲಭ ವಿಧಾನ
ಮೊದಲು ಹಸಿರು ಬಟಾಣಿಯನ್ನ ಸ್ವಲ್ಪ ಉಪ್ಪು ಹಾಕಿ ಬೇಯಿಸಿಕೊಳ್ಳಿ. ಅದು ಬೇಯುತ್ತಿರುವಾಗ ಕ್ಯಾರೆಟ್ ಅನ್ನು ತುರಿದುಕೊಳ್ಳಿ. ಹಾಗೆಯೇ, ಟೊಮ್ಯಾಟೋ ಮತ್ತು ಈರುಳ್ಳಿಯನ್ನ ಸಣ್ಣದಾಗಿ ಹೆಚ್ಚಿಕೊಳ್ಳಿ. ಇವುಗಳನ್ನ ಹೆಚ್ಚಿಕೊಂಡ ನಂತರ ಹಸಿ ಮೆಣಸನ್ನ ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನೀವು ಸುಮಾರು 15 ದಿನಗಳ ತನಕ ಸ್ಟೋರ್ ಮಾಡಿಕೊಂಡು ಇಟ್ಟುಕೊಳ್ಳಬಹುದು. ಇನ್ನು ಶೇಂಗಾವನ್ನ ಸ್ವಲ್ಪ ಫ್ರೈ ಮಾಡಿಕೊಂಡು ಇಟ್ಟುಕೊಳ್ಳಿ.
ಈಗ ಒಂದು ಪಾತ್ರೆಯನ್ನ ತೆಗೆದುಕೊಳ್ಳಿ. ಅದಕ್ಕೆ ಎಲ್ಲಾ ಮಂಡಕ್ಕಿಗಳನ್ನ ಹಾಕಿ. ಅದರ ಮೇಲೆ 2 ಚಮಚ ಎಣ್ಣೆ ಹಾಕಿ. ಈಗ ನಿಪ್ಪಟ್ಟನ್ನ ತೆಗೆದುಕೊಂಡು ಪುಡಿ ಪುಡಿ ಮಾಡಿಕೊಂಡು ಹಾಕಿ. ಅದರ ಜೊತೆಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ತುರಿದುಕೊಂಡ ಕ್ಯಾರೆಟ್ ಹಾಗೂ ಸಣ್ಣದಾಗಿ ಟೊಮ್ಯಾಟೋ ಹಾಕಿ ಮಿಶ್ರಣ ಮಾಡಿ. ಈಗ ಅದಕ್ಕೆ ಹಸಿ ಮೆಣಸಿನ ಪೇಸ್ಟ್ ಹಾಗೂ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಉಪ್ಪು ಹಾಗೂ ಖಾರ ಅಗತ್ಯ ಇದೆಯಾ ನೋಡಿ. ಕೊನೆಯಾದಾಗಿ ಶೇಂಗಾ ಹಾಗೂ ಹಸಿರು ಬಟಾಣಿ ಹಾಕಿ ಮಿಶ್ರಣ ಮಾಡಿ. ನಿಮಗೆ ಹಸಿ ಬಟಾಣಿ ಹಾಗೂ ಶೇಂಗಾ ಎರಡೂ ಬೇಡ ಎಂದರೆ ಯಾವುದಾದರೂ ಒಂದನ್ನ ಹಾಕಬಹುದು. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಸಣ್ಣದಾಗಿ ಹೆಚ್ಚಿಕೊಂಡಿರುವ ಕೊತ್ತಂಬರಿ ಸೊಪ್ಪನ್ನ ಹಾಕಿದರೆ ನಿಪ್ಪಟ್ಟು ಮಸಾಲಾ ಚುರುಮುರಿ ಸವಿಯಲು ರೆಡಿ
ನೀವು ಇದಕ್ಕೆ ಬೇಕಾದರೆ ಮಾವಿನ ಕಾಯಿ, ಸೌತೆ ಕಾಯಿ ಹಾಗೂ ದಾಳಿಂಬೆಗಳನ್ನ ಸಹ ಅಲಂಕಾರಕ್ಕೆ ಹಾಕಬಹುದು. ಆದರೆ ಹಾಗೆಯೇ, ತಿಂದರೆ ಅದರ ರುಚಿ ಜಾಸ್ತಿ ಇರುತ್ತದೆ