Thursday, April 16, 2026
Homeಕ್ರೈಂCRIME: ಖಾಸಗಿ ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಕೊಲೆ ಆರೋಪ ಮಾಡಿದ ತಂದೆ!

CRIME: ಖಾಸಗಿ ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಕೊಲೆ ಆರೋಪ ಮಾಡಿದ ತಂದೆ!

ಬೆಂಗಳೂರು: ಒಂಬತ್ತನೇ ಮಹಡಿಯಿಂದ ವಿದ್ಯಾರ್ಥಿಯೋರ್ವ (Student Death) ಜಿಗಿದು ಮೃತಪಟ್ಟಿರುವ ಘಟನೆ ನಗರದ ಯಲಹಂಕದಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ (Hostel) ನಡೆದಿದೆ. ಆದರೆ ಇದೀಗ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.

ಮೃತನನ್ನು ಜಾರ್ಖಂಡ್‌ನ ರಾಂಚಿ ಮೂಲದ ಲಕ್ಷ್ಯ ಮಿಶ್ರಾ (21) ಎಂದು ಗುರುತಿಸಲಾಗಿದೆ. ಏಪ್ರಿಲ್ 08 ರಂದು ನಸುಕಿನ ಜಾವ ಸುಮಾರು 3 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಲಕ್ಷ್ಯ ಮಿಶ್ರಾ ಸಾವು ಕೇವಲ ಆತ್ಮಹತ್ಯೆಯಲ್ಲ, ಇದರಲ್ಲಿ ಬೇರೆ ಏನೋ ಸಂಚಿದೆ ಎಂದು ಆತನ ತಂದೆ ಅಂಜನಿ ಕುಮಾರ್ ಗಂಭೀರವಾಗಿ ಆರೋಪಿಸಿದ್ದಾರೆ.

ಪೊಲೀಸರು ಮತ್ತು ತನಿಖಾ ತಂಡ ಘಟನಾ ಸ್ಥಳವನ್ನು ಪರಿಶೀಲಿಸಿದಾಗ, ವಿದ್ಯಾರ್ಥಿ ಬಿದ್ದಿದ್ದ ಜಾಗದಲ್ಲಿ ಕೇವಲ ಅಲ್ಪ ಪ್ರಮಾಣದ ರಕ್ತ ಮಾತ್ರ ಕಂಡುಬಂದಿದೆ. ಎತ್ತರದಿಂದ ಬಿದ್ದಾಗ ಆಗಬೇಕಾದ ಗಾಯ ಅಥವಾ ರಕ್ತದ ಕಲೆಗಳು ಅಲ್ಲಿ ಹೆಚ್ಚಾಗಿ ಕಂಡುಬಂದಿಲ್ಲ. ಇನ್ನು ಮುಖ್ಯವಾಗಿ, ಹಾಸ್ಟೆಲ್ ಕಿಟಕಿಯಿಂದ ಕೆಳಕ್ಕೆ ಜಿಗಿಯಲು ಸಾಧ್ಯವಾಗದ ರೀತಿಯಲ್ಲಿ ಕಟ್ಟಡ ಇರುವುದು ಕಂಡುಬಂದಿದದೆ. ಇದು ವಿದ್ಯಾರ್ಥಿ ಅಕಸ್ಮಾತ್ ಆಗಿ ಬಿದ್ದಿದ್ದಾನೋ ಅಥವಾ ಈ ಸಾವಿನ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇದೇ ವೇಳೆ ಹಾಸ್ಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಕೂಡ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಘಟನೆ ನಡೆಯುವ ಮುನ್ನ ಅಂದರೆ ರಾತ್ರಿ 11:16ರ ಸುಮಾರಿಗೆ ಲಕ್ಷ್ಯ ಹಾಸ್ಟೆಲ್‌ನ ಪ್ಯಾಸೇಜ್‌ನಲ್ಲಿ ಓಡಾಡುತ್ತಿರುವುದು ದಾಖಲಾಗಿದೆ. ಅದೇ ಸಮಯದಲ್ಲಿ ನಾಲ್ಕೈದು ಹುಡುಗರು ಮತ್ತೊಂದು ಕೋಣೆಗೆ ಹೋಗಿರುವುದು ಕಂಡುಬಂದಿದೆ. ತದನಂತರ ಸುಮಾರು 2 ಗಂಟೆಯ ಸುಮಾರಿಗೆ ಲಕ್ಷ್ಯ ಅಲ್ಲಿಂದ ಹೊರಬಂದು ಮತ್ತೆ ಒಳಗೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ

ಸದ್ಯ ಪೊಲೀಸರು ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ (FSL) ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರವೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಖರ ಮಾಹಿತಿ ಹೊರಬೀಳಲಿದೆ.

ಇದನ್ನೂ ಓದಿ: ಬಾರ್‌ನಲ್ಲಿ ಕುಳಿತು ಗುರಾಯಿಸಿದಕ್ಕೆ ಗಲಾಟೆ –  ರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಕಿರಾತಕರು!- VIDEO

ಹೆಚ್ಚಿನ ಸುದ್ದಿ

Change Language »
error: Content is protected !!