ಮೊಬೈಲ್ ಆಪ್ ಮೂಲಕ ಬಳಕೆದಾರರಿಗೆ ಸಣ್ಣ ಮೊತ್ತದ ಸಾಲ ನೀಡಿ ದುಬಾರಿ ಬಡ್ಡಿ ವಿಧಿಸುತ್ತಿದ್ದ ಚೀನಾ ಮೂಲದ ಅಕ್ರಮ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಸಾರಿರುವ ಜಾರಿ ನಿರ್ದೇಶನಾಲಯ ವಿವಿಧ ಬ್ಯಾಂಕ್ ಖಾತೆಗಳಿಂದ 106 ಕೋಟಿ ರೂ. ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ. ಭಾರತೀಯ ವ್ಯಕ್ತಿಗಳನ್ನು ನಾಮಮಾತ್ರ ನಿರ್ದೇಶಕರನ್ನಾಗಿ ನೇಮಿಸಿಕೊಂಡು ಚೀನಾ ಮೂಲದ ವ್ಯಕ್ತಿಗಳು ನಿರ್ವಹಿಸುತ್ತಿರುವ ಹಲವು ಆಪ್‍ಗಳು ಭಾರತದಲ್ಲಿ ಬಳಕೆಯಾಗುತ್ತಿದ್ದು, ಇವುಗಳ ವಿರುದ್ಧ ಸಮರ ಸಾರಿರುವುದಾಗಿ ಬುಧವಾರ ಜಾರಿ ನಿರ್ದೇಶನಾಲಯ ತಿಳಿಸಿದೆ.
ಆಪ್ ಮೂಲಕ ಗ್ರಾಹಕರಿಗೆ ಸುಲಭ ಸಾಲದ ಆಮಿಷ ಒಡ್ಡಲಾಗುತ್ತಿತ್ತು. ಆಪ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳುವಾಗ ಗ್ರಾಹಕರ ಮೊಬೈಲ್ ನಲ್ಲಿರುವ ಎಲ್ಲಾ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಲು ಪರವಾನಗಿ ಕೇಳುತ್ತಿತ್ತು. ಬಳಿಕ ಕಡಿಮೆ ಮೊತ್ತದ ಸಾಲ ನೀಡಿ ಶೇ 30-40 ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಒಂದು ವೇಳೆ ಗ್ರಾಹಕ ಹಣ ನೀಡಲು ನಿರಾಕರಿಸಿದರೆ, ಆತನ ಮೊಬೈಲ್‍ನಿಂದ ಸಂಗ್ರಹಿಸಿದ್ದ ಸ್ನೇಹಿತರು, ಸಂಬಂಧಿಕರಿಗೆ ಸಂದೇಶ ಕಳಿಸಿ, ಕರೆ ಮಾಡಿ ತೇಜೋವಧೆ ಮಾಡಲಾಗುತ್ತಿತ್ತು. ಈ ಬಗ್ಗೆ ಹಲವು ಸಂತ್ರಸ್ತರಿಂದ ಸೈಬರ್ ಕ್ರೈಮ್ ಸೆಲ್‍ನಲ್ಲಿ ದೂರು ದಾಖಲಾಗಿತ್ತು.
ಆರೋಪಿ ಸಂಸ್ಥೆಗಳ ವಿರುದ್ಧ ಲೇವಾದೇವಿ ಕಾಯಿದೆ, ಅಧಿಕ ಬಡ್ಡಿದರ ನಿಷೇಧ ಕಾಯಿದೆ ಹಾಗೂ ಮಾಹಿತಿ ತಂತ್ರಜ್ಞಾನ ದುರ್ಬಳಕೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚೀನಾ ಮೂಲದ ಅಕ್ರಮ ದಂಧೆಕೋರರು ಭಾರತದಲ್ಲಿ ನಕಲಿ ಆಡಳಿತ ಮಂಡಳಿಯ ಹೆಸರಿನಲ್ಲಿ ಈ ಜಾಲ ನಡೆಸುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿರುವುದಾಗಿ ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.