ನವದೆಹಲಿ: ಹತ್ತು ದಿನಗಳ ಸುದೀರ್ಘ ರಜೆಯ ನಂತರ ಕಚೇರಿಗೆ ವಾಪಾಸ್ ಬರುವಾಗ ಯಾವುದೇ ಉದ್ಯೋಗಿಗಾದರೂ ‘ನಾಳೆಯಿಂದ ಆಫೀಸಿನಲ್ಲಿ ಕೆಲಸದ ಒತ್ತಡ ಹೇಗಿರುತ್ತದೆಯೋ, ಎಷ್ಟು ಕೆಲಸ ಬಾಕಿ ಉಳಿದಿದೆಯೋ’ ಎಂಬ ಆತಂಕ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ಉದ್ಯೋಗಿ ತಾನು ರಜೆ ಮುಗಿಸಿ ನಾಳೆಯಿಂದ ಕೆಲಸಕ್ಕೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದಾಗ, (Viral News) ಕಂಪನಿಯ ಬಾಸ್‌ನಿಂದ ಸಿಕ್ಕ ಉತ್ತರ ಆತನನ್ನು ಮಾತ್ರವಲ್ಲ, ಇಡೀ ಇಂಟರ್ನೆಟ್ ಜಗತ್ತನ್ನೇ ಆಶ್ಚರ್ಯಚಕಿತಗೊಳಿಸಿದೆ.
ನಾಳೆಯೂ ರಜೆ ಎಂದ ಬಾಸ್
ಆರ್/ಇಂಡಿಯನ್ ವರ್ಕ್‌ಪ್ಲೇಸ್’ (r/IndianWorkplace) ಎಂಬ ರೆಡ್ಡಿಟ್ ಪುಟದಲ್ಲಿ ಉದ್ಯೋಗಿಯೊಬ್ಬರು ತಮ್ಮ ಕಚೇರಿಯ ಈ ಅಪರೂಪದ ಹಾಗೂ ಹಿತಕರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು ಹತ್ತು ದಿನಗಳ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿರುವುದಾಗಿ ಮತ್ತು ನಾಳೆಯಿಂದ ಕೆಲಸಕ್ಕೆ ಹಾಜರಾಗುವುದಾಗಿ ಕಂಪನಿಯ ಸಂಸ್ಥಾಪಕರಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದರು. ಅದಕ್ಕೆ ಉತ್ತರಿಸಿದ ಕಂಪನಿಯ ಮುಖ್ಯಸ್ಥರು, “ತುಂಬಾ ಒಳ್ಳೆಯದು, ನಾಳೆಯೂ ಒಂದು ದಿನ ರಜೆ ತಗೆದುಕೊಂಡು ನಿನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿಕೊಂಡು ನಿಧಾನವಾಗಿ ಸೆಟಲ್ ಆಗು. ಬುಧವಾರದಿಂದ ಕೆಲಸ ಮುಂದುವರಿಸು” ಎಂದು ಅತ್ಯಂತ ಸರಳವಾಗಿ ವಾಪಾಸ್ ಮೆಸೇಜ್ ಕಳುಹಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಈ ಹೃದಯಸ್ಪರ್ಶಿ ಮಾತುಕತೆಯ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಉದ್ಯೋಗಿ, ತಮಗೆ ಈ ಹಿಂದೆ ಅತ್ಯಂತ ಕಠಿಣ ಹಾಗೂ ಒತ್ತಡದ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವಿತ್ತು, ಆದರೆ ಈ ಹೊಸ ಕಚೇರಿಯಲ್ಲಿ ಬಾಸ್ ತೋರಿಸಿದ ಈ ಸಣ್ಣ ಉದಾರತೆ ತಮಗೆ ತಮ್ಮ ಮೌಲ್ಯ ಏನೆಂಬುದನ್ನು ನೆನಪಿಸಿದೆ ಎಂದು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ವೃತ್ತಿಪರರು ಇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕಂಪನಿಗಳು ಕೇವಲ ಕೆಲಸ ಮತ್ತು ಲಾಭದ ಕಡೆಗೆ ಮಾತ್ರ ಗಮನ ಹರಿಸದೆ, ತಮ್ಮ ಉದ್ಯೋಗಿಗಳ ಮಾನಸಿಕ ಆರೋಗ್ಯ ಹಾಗೂ ನೆಮ್ಮದಿಗೆ ಒತ್ತು ನೀಡಿದಾಗ ಇಂತಹ ಉತ್ತಮ ಕೆಲಸದ ವಾತಾವರಣ ನಿರ್ಮಾಣವಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವು ಬಳಕೆದಾರರು ತಮಾಷೆಯಾಗಿ ಕಮೆಂಟ್ ಮಾಡಿದ್ದು, ರಜೆ ಮುಗಿಸಿ ಬರುವಾಗ ಬಾಕಿ ಇರುವ ಕೆಲಸದ ಬೆಟ್ಟ ನೆನೆದು ಹೆದರುವ ಉದ್ಯೋಗಿಗಳಿಗೆ ಇಂತಹ ಬಾಸ್ ಸಿಕ್ಕರೆ ಅದಕ್ಕಿಂತ ಅದೃಷ್ಟ ಬೇರೊಂದಿಲ್ಲ ಎಂದು ಈ ಅಪರೂಪದ ಮ್ಯಾನೇಜರ್ ಗುಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಇದನ್ನೂ ಓದಿ: ಐಟಿ ಕೆಲಸ ಬೇಡ, ಕುರಿ ಕಾಯೋದು ಸಾಕು: ಪ್ರಕೃತಿಯತ್ತ ಮುಖ ಮಾಡುತ್ತಿದ್ದಾರೆ ಚೀನಾದ ಯುವಕರು!