ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ ಜಪ್ತಿಪಡಿಸಿಕೊಳ್ಳಲಾದ ಹಣ ಮತ್ತು ವಸ್ತುವಿನ ವಿವರಗಳನ್ನು ಚುನಾವಣಾ ಆಯೋಗ ಬಹಿರಂಗ ಪಡಿಸಿದೆ. ಮಾ. 29 ರಿಂದ ಏ.4 ರವರೆಗೆ ರಾಜ್ಯಾದ್ಯಂತ 12, 82,94,736 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, 16 ಕೋಟಿ ರೂ. ಗಳಿಗೂ ಹೆಚ್ಚು ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದೆ.
ರಾಜ್ಯಾದ್ಯಂತ ವಿಚಕ್ಷಣ ದಳ, ಕಣ್ಗಾವಲು ತಂಡಗಳು, ಪೊಲೀಸ್ ಇಲಾಖೆ, ಆದಾಯ ತೆರಿಗೆ ಇಲಾಖೆ ಮತ್ತು ಅಬಕಾರಿ ಇಲಾಖೆಗಳು ನಡೆಸಿರುವ ಕಾರ್ಯಾಚರಣೆಯಲ್ಲಿ 41 ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತು ಮತ್ತು 6.72 ಕೋಟಿ ರೂ. ಮೌಲ್ಯದ ಬಂಗಾರ, 63.98 ಲಕ್ಷ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು, ಹಾಗೂ 10.79 ಕೋಟಿ ರೂ. ಮೌಲ್ಯದ ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಆರೇ ದಿನಗಳಲಿ ರಾಜ್ಯದ್ಯಂತ 31, 486 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಂಡಿದ್ದರೆ, 10 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 07 ಶಸ್ತ್ರಾಸ್ತ್ರಗಳ ಲೈಸೆನ್ಸ್ ರದ್ದುಪಡಿಸಲಾಗಿದೆ.
ಸಿಆರ್‍ಪಿಸಿ ಕಾಯಿದೆಯಡಿ 1,416 ಪ್ರಕರಣಗಳನ್ನು ದಾಖಲಿಸಲಾಗಿದ್ದು, 3554 ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿದೆ. 1869 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ.
ಒಟ್ಟಾರೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಭರ್ಜರಿ ಬೇಟೆಯಾಡಿರುವ ತನಿಖಾ ದಳಗಳು, ಒಟ್ಟಾರೆ ನಗದು ಹಣವೂ ಸೇರಿದಂತೆ 47.43 ಕೋಟಿ ರೂ. ಮೌಲ್ಯದ ಪದಾರ್ಥಗಳನ್ನು ವಶಪಡಿಸಿಕೊಂಡಿದೆ.