ಚುನಾವಣಾ ಕಾವು ಕರ್ನಾಟಕದಲ್ಲಿ ಭರ್ಜರಿಯಾಗಿಯೇ ರಂಗೇರಿಸುತ್ತಿದೆ. ಇನ್ನೂ ದಿನಾಂಕ ನಿಗದಿಯಾಗದಿದ್ದರೂ ಸಹ ಮತಬೇಟೆಯಲ್ಲಿ ತೊಡಗಿರುವ ವಿವಿಧ ಪಕ್ಷಗಳ ಉಮೇದುವಾರರು ಮತ್ತು ಆಕಾಂಕ್ಷಿಗಳು ಈಗಾಗಲೇ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಮತದಾರರಿಗೆ ಆಮಿಷವೊಡ್ಡುವ ಅಭ್ಯರ್ಥಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನವಣಾ ಆಯೋಗ ತನ್ನ ದಾಳಿಕಾರ್ಯವನ್ನೂ ಸಹ ಚುರುಕುಗೊಳಿಸಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಹಲವೆಡೆ ತನ್ನ ತಪಾಸಣಾ ಕಾರ್ಯಗಳನ್ನು ಚುನಾವಣಾ ಆಯೋಗ ಹೆಚ್ಚಿಸಿದೆ. ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ರಸ್ತೆಗಳಲ್ಲಿ ನಾಕಾಬಂದಿ ಹಾಕಿಕೊಳ್ಳಲಾಗಿದೆ, ಆಯಾ ಸಂಚಾರ ಮಾರ್ಗದಲ್ಲಿ ಸಾಗುವ ಎಲ್ಲಾ ವಾಹನಗಳನ್ನು ಕೂಲಂಕಷವಾಗಿ ತಪಾಸಣೆಗೊಳಪಡಿಸುತ್ತಿದೆ.
ಹಣ, ಹೆಂಡ ಮತ್ತು ವಸ್ತುಗಳು: ಇದುವರೆಗೂ ಚುನಾವಣಾ ಆಯೋಗ ನಡೆಸಿರುವ ದಾಳಿಯಲ್ಲಿ ಸುಮಾರು 1.21 ಕೋಟಿ ರೂ. ನಗದು ಹಣವನ್ನು ಜಪ್ತಿಮಾಡಿಕೊಳ್ಳಲಾಗಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ 56,265 ಲೀ ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು ಇದರ ಮೌಲ್ಯ ಸುಮಾರು 2.66 ಕೋಟಿ ರೂ. ಎಂದು ಆಯೋಗ ಮಾಹಿತಿ ನೀಡಿದೆ. ಇದೇ ರೀತಿಯಲ್ಲಿ ಮತದಾರರಿಗೆ ಉಡುಗೊರೆಯಾಗಿ ಹಂಚಲು ಸಾಗಿಸಲಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಇವುಗಳ ಮೌಲ್ಯ ಆರು ಕೋಟಿ ರೂ. ಗಳಿಗೂ ಹೆಚ್ಚಿದೆ.
ಇವಲ್ಲದೆ ಸೀರೆ, ಕುಕ್ಕರ್, ಲ್ಯಾಪ್ ಟಾಪ್, ಪಾತ್ರೆಗಳು, ಟಿವಿ, ಮಿಕ್ಸಿ ಸೇರಿದಂತೆ ಹಲವು ವಸ್ತುಗಳನ್ನು ರಾಜ್ಯಾದ್ಯಂತ ವಶಕ್ಕೆ ಪಡೆದಿರುವುದಾಗಿ ಚುನಾವಣಾ ಆಯೋಗ ಮಾಹಿತಿ ನೀಡಿದೆ