ಬೆಂಗಳೂರು: ಸಚಿವ ಹಾಗೂ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ವಿರುದ್ಧ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಅಡಿಯಲ್ಲಿ ಚುನಾವಣಾಧಿಕಾರಿಗಳು ಎಫ್‍ಐಆರ್ ದಾಖಲಿಸಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‍ಐಆರ್ ದಾಖಲಾಗಿದೆ.
ಕೆಲದಿನಗಳ ಹಿಂದೆ ಕ್ಷೇತ್ರದಲ್ಲಿ ಮುನಿರತ್ನ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷದ ಕುಸುಮಾ ಹನುಮಂತಪ್ಪ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋ ತುಣುಕಿನಲ್ಲಿ ತಮಿಳಿನಲ್ಲಿ ಮಾತನಾಡಿರುವ ಮುನಿರತ್ನ ನಿಮ್ಮ ಬಳಿ ಯಾರಾದರೂ ಬಂದರೆ ಅಟ್ಟಾಡಿಸಿಕೊಂಡು ಹೊಡೆಯಿರಿ, ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಇತ್ಯಾದಿಯಾಗಿ ರೋಷಾವೇಷದ ಭಾಷಣ ಮಾಡಿದ್ದರು. ಇದು ಕನ್ನಡಿಗರ ವಿರುದ್ಧ ತಮಿಳರನ್ನು ಎತ್ತಿಕಟ್ಟುತ್ತಿರುವ ಕಾರ್ಯ ಎಂದು ಕುಸುಮಾ ಆರೋಪಿಸಿದ್ದರು. ಆದರೆ ಮಾ. 31 ರಂದು ಈ ಕುರಿತು ಸುದ್ದಿವಾಹಿನಿಗಳ ಮುಂದೆ ಸ್ಪಷ್ಟೀಕರಣ ನೀಡಿದ್ದ ಸಚಿವ ಮುನಿರತ್ನ ಅದು ಕ್ಷೇತ್ರದಲ್ಲಿ ಮತಾಂತರ ನಡೆಸುತ್ತಿರುವ ಕ್ರೈಸ್ತರ ವಿರುದ್ಧ ಹೇಳಿದ್ದು ಎಂದು ನುಡಿದಿದ್ದರು.
ಕೂಡಲೇ ಅಖಿಲ ಭಾರತ ಕ್ರೈಸ್ತ ಮಹಾಸಭಾ, ಮುನಿರತ್ನ ವಿರುದ್ಧ ದೂರು ದಾಖಲಿಸಿತ್ತು. ವಾಹಿನಿಗಳಲ್ಲಿ ಬಿತ್ತರಗೊಂಡ ಸುದ್ದಿ ಹಾಗೂ ಕ್ರೈಸ್ತ ಮಹಾಸಭಾ ನೀಡಿದ ದೂರಿನ ಆಧಾರದ ಮೇರೆಗೆ ಸಚಿವ ಮುನಿರತ್ನ ವಿರುದ್ಧ ಚುನಾವಣಾಧಿಕಾರಿ ಮನೋಜ್ ಕುಮಾರ್ ಠಾಣೆಯಲ್ಲಿ, ಕೋಮದ್ವೇಷದ ಭಾಷಣ ಮಾಡಿ ಅಲ್ಪಸಂಖ್ಯಾತರ ಹಕ್ಕು ಗೌರವಗಳಿಗೆ ಚ್ಯುತಿಯನ್ನುಂಟು ಮಾಡಿದ ಆರೋಪದಡಿ ಮುನಿರತ್ನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಫ್‍ಐಆರ್ ದಾಖಲಿಸಿದ್ದಾರೆ.