ಬೆಂಗಳೂರು: ಮತದಾರರರಿಗೆ ಆಮಿಷ ಹಾಗೂ ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಟ್ಟಿರುವ ಆಯೋಗ ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ತನ್ನ ಕಾರ್ಯಾರಂಭ ಮಾಡಿತ್ತು. ಇದುವರೆಗೂ ಒಟ್ಟಾರೆ 1985 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದ್ದು 57.72 ಕೋಟಿ ರೂ. ನಗದು ಸೇರಿದಂತೆ ಉಡುಗೊರೆ ವಸ್ತುಗಳು, ಬೆಳ್ಳಿ ವಸ್ತಗಳು, ಅಕ್ರಮ ಮದ್ಯ ಮುಂತಾದವುಗಳನ್ನು ಜಪ್ತಿಪಡಿಸಿಕೊಂಡಿರುವುದಾಗಿ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ
ಚುನಾವಣಾ ಅಕ್ರಮಗಳ ಮೇಲೆ ಕಣ್ಣಿಡಲು ಫ್ಲೈಯಿಂಗ್ ಸ್ಕ್ವಾಡ್, ಸ್ಥಿರ ವಿಚಕ್ಷಣಾ ತಂಡಗಳನ್ನು ಆಯೋಗ ನಿಯೋಜಿಸಿದೆ. ಇವುಗಳೊಂದಿಗೆ ಇತರೆ ಸರ್ಕಾರಿ ಸಂಸ್ಥೆಗಳೂ ಸಹ ಏಕಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂ. ವೆಚ್ಚದ ಮಿತಿ ನಿಗದಿ ಪಡಿಸಲಾಗಿದ್ದು, ಚುನಾವಣಾ ವೆಚ್ಚದ ಪರಿಶೀಲನೆಗಾಗಿಯೇ 234 ಸಹಾಯಕ ವೆಚ್ಚ ನಿರೀಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.
ಪೊಲೀಸ್ ಇಲಾಖೆ 34.36 ಕೋಟಿ ರೂ. ಮೌಲ್ಯದ ವಸ್ತು, 14.24 ಕೋಟಿ ರೂ. ನಗದು ಹಣ, 530 ಕೆಜಿ ಮಾದಕ ವಸ್ತುಗಳು, 15 ಕೆಜಿ ಚಿನ್ನ, 135 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದೆ. ಅಬಕಾರಿ ಇಲಾಖೆ 6.84 ಕೋಟಿ ರೂ. ಮೌಲ್ಯದ 1,38,8747 ಲೀಟರ್ ಮದ್ಯ, ಹಾಗೂ 43 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದೆ. ಆದಾಯ ತೆರಿಗೆ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 1.16 ರೂ. ನಗದು ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ 5.02 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಹಾಗೂ ಕಂದಾಯ ಗುಪ್ತ ಚರ ಇಲಾಖೆ 1.03 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.
ಮಾದಕವಸ್ತು ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ 57.17 ಲಕ್ಷ ರೂ. ಮೌಲ್ಯದ ಮಾದಕವಸ್ತು ಗಳನ್ನು ವಶಪಡಿಸಿಕೊಂಡಿದ್ದರೆ, ನಾಗರಿಕ ವಿಮಾನಯಾನ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 69.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.