ಉತ್ತರ ಕನ್ನಡ : ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ಕ್ಷೇತ್ರವಾದ ಯಲ್ಲಾಪುರದ ಅಜ್ಜರಣಿ ಮತ್ತು ಮತಗುಣಿ ಗ್ರಾಮಗಳ ಜನರು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಊರಿಗೆ ಸಂಪರ್ಕ ಕಲ್ಪಿಸಲು ಶಾಶ್ವತ ಸೇತುವೆ ಇಲ್ಲ. ಸೇತುವೆ ನಿರ್ಮಿಸದಿದ್ದರೆ ಮತ ಕೇಳಲು ಬರಬೇಡಿ ಎಂಬ ಬರಹದ ಬ್ಯಾನರ್‌ನ್ನು ಊರ ಬಾಗಿಲಿಗೇ ಹಾಕಿದ್ದಾರೆ.
ಪ್ರತಿಬಾರಿ ಮಳೆಗಾಲ ಬಂದಾಗಲೂ ವರದಾ ನದಿಯಲ್ಲಿ ಉಬ್ಬರವುಂಟಾದಾಗ ಈ ಗ್ರಾಮ ಸಂಪರ್ಕ ಕಡಿದುಕೊಳ್ಳುತ್ತದೆ. ಊರಿನವರು ಶಾಲೆಗೆ, ಅಂಗಡಿಗೆ, ಆಸ್ಪತ್ರೆಗೆ ಹೋಗಬೇಕೆಂದರೆ ಹರಸಾಹಸ ಪಡಬೇಕಾದ ಪರಿಸ್ಥಿತಿ. ಇಂಥಾ ಊರಿನಲ್ಲೂ ಸಹ ಸಾಕಷ್ಟು ಮನೆಗಳು, ಮತಗಳು ಇವೆ. ಆದರೂ ಪ್ರತಿ ಬಾರಿ ಚುನಾವಣೆ ಮುಗಿದ ಬಳಿಕ ಜನಪ್ರತಿನಿಧಿಗಳು ನಮ್ಮನ್ನು ಮರೆತೇ ಬಿಡುತ್ತಾರೆ ಎಂಬುದು ಗ್ರಾಮಸ್ಥರ ಅಳಲು.
ಹಾಗೆಂದು ಇಲ್ಲಿ ಸೇತುವೆ ನಿರ್ಮಿಸುವ ಪ್ರಯತ್ನ ನಡೆದೇ ಇಲ್ಲವೆಂದೇನೂ ಇಲ್ಲ. ಶಾಸಕರು ಸ್ವತಃ ತಮ್ಮ ಅಮೃತ ಹಸ್ತದಿಂದ ಬಂದು ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ಹೋಗಿದ್ದರು. ಆದರೆ ಸೇತುವೆ ಕಾಮಗಾರಿ ಧಿಡೀರನೆ ನಿಂತುಹೋಯ್ತು. ಈ ಬಾರಿ ಸೇತುವೆ ನಿರ್ಮಿಸದೆ ಯಾವ ಪಕ್ಷದವೂ ಇಲ್ಲಿ ಮತ ಕೇಳಲು ಬರಬೇಡಿ ಎಂದು ಗ್ರಾಮಸ್ಥರು ಕಟುವಾಗಿ ನುಡಿದಿದ್ದಾರೆ.