ವಾಮಾಚಾರ ಮಾಡುತ್ತಿದ್ದಾರೆಂಬ ಗುಮಾನಿಯ ಮೇಲೆ ಬುಡಕಟ್ಟು ಜನಾಂಗದ ವೃದ್ಧ ದಂಪತಿಯನ್ನು ದಾರುಣವಾಗಿ ಹೊಡೆದು ಕೊಂದಿರುವ ಘಟನೆ ಪಶ್ಚಿಮಬಂಗಳಾದ ಭಿರ್ಭೂಮ್ ಜಿಲ್ಲೆಯ ಅಹ್ಮದ್ ಪುರದಲ್ಲಿ ನಡೆದಿದೆ. ಪಾಂಡ್ರು ಹೆಂಬ್ರೋಮ್(62) ಮತ್ತು ಪಾರ್ವತಿ ಹೆಂಬ್ರೋಮ್ (52) ಮೃತ ದಂಪತಿಗಳಾಗಿದ್ದಾರೆ.
ವಾಮಾಚಾರದ ಆರೋಪದ ಮೇಲೆ ಈ ಬಡ ದಂಪತಿಗಳನ್ನು ಕೊಂದು ಹಾಕಿದ್ದ ಗ್ರಾಮಸ್ಥರು ಗುಪ್ತವಾಗಿ ಅಂತ್ಯ ಸಂಸ್ಕಾರ ನಡೆಸಲೂ ಸಹ ತಯಾರಿ ನಡೆಸಿದ್ದರು. ಗ್ರಾಮದ ಮುಖ್ಯಸ್ಥನ ನೇತೃತ್ವದಲ್ಲಿ ತಂಡವೊಂದು ಅಂತ್ಯಸಂಸ್ಕಾರಕ್ಕೂ ಸಹ ಸಿದ್ದವಾಗಿತ್ತು. ಆದರೆ ಈ ಬಗ್ಗೆ ತಿಳಿದಿದ್ದ ಕೆಲವು ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ತಡೆಯೊಡ್ಡಿದ್ದಾರೆ. ಈ ವಿವಾದದ ಬಗ್ಗೆ ಪೊಲೀಸರಿಗೆ ಸುದ್ದಿ ತಿಳಿದು ಅವರು ಸ್ಥಳಕ್ಕೆ ಆಗಮಿಸಿದಾಗ ವಿಷಯ ಹೊರಬಂದಿದೆ. ಪ್ರಕರಣದ ತನಿಖೆಯ ಬಗ್ಗೆ ಪೊಲೀಸ್ ಆಯುಕ್ತರಿಗೆ ಆದೇಶಿಸಲಾಗಿದ್ದು, ಸೈಂಥಿಯಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.