ಬಳ್ಳಾರಿಯ ಗಣಿಧಣಿ ಜನಾರ್ಧನ ರೆಡ್ಡಿಯವರಿಗೆ ಆಪ್ತನಾದ ಖಾರದಪುಡಿ ಮಹೇಶ್ ಮತ್ತು ಅವರ ನಿಕಟವರ್ತಿಗಳಿಗೆ ಸೇರಿದ ಸುಮಾರು 54.18 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದೆ. ವಿಜಯನಗರದ ಹೊಸಪೇಟೆ ನಿವಾಸಿಯಾಗಿರುವ ಖಾರದಪುಡಿ ಮಹೇಶ್ ಅಕ್ರಮ ಗಣಿಗಾರಿಕೆ, ಅದಿರು ಕಳ್ಳಸಾಗಣೆ ಮತ್ತು ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಆರೋಪ ಎದುರಿಸುತ್ತಿದ್ದು, ಇವರ ವಿರುದ್ದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಳ್ಳಲಾಗಿತ್ತು. ಮಹೇಶ್ ಮತ್ತು ಅವರ ಸೋದರರಾದ ಗೋವಿಂದರಾಜ್, ಸದಾಶಿವ, ಕುಮಾರ್ ಮತ್ತಿತರರು ನಕಲಿ ಪರವಾನಗಿ ಬಳಸಿ ಅದಿರು ಸಾಗಾಣಿಕ ನಡೆಸಿದ ಆರೋಪವನ್ನೂ ಸಹ ಎದುರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟವುಂಟಾಗಿತ್ತು.
ಜೊತೆಗೆ ಕಳ್ಳಸಾಗಣೆಗೆ ನಡೆಸುವವರಿಗೆ ಭದ್ರತೆ ನೀಡಲು ರಿಸ್ಕ್ ಮನಿ ಎಂಬ ಹೆಸರಿನಲ್ಲಿ ಗಣಿ ಉದ್ಯಮಿಗಳಿಂದ ಹಫ್ತಾ ಸಂಗ್ರಹಿಸಲಾಗುತ್ತಿತ್ತು. ಪ್ರಸ್ತುತ ಮಹೇಶ್ ಮತ್ತು ಸಂಗಡಿಗರಿಗೆ ಸೇರಿದ ಖಾಲಿ ಜಮೀನು, ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿದಂತೆ 30 ಸ್ಥಿರಾಸ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.