ನವದೆಹಲಿ: ರಿಲಯನ್ಸ್ ಗ್ರೂಪ್ (Reliance Group) ಅಧ್ಯಕ್ಷ ಅನಿಲ್ ಅಂಬಾನಿ (Anil Ambani) ಅವರಿಗೆ ಇಡಿ ಶಾಕ್ ನೀಡಿದ್ದು, ಬರೋಬ್ಬರಿ 3 ಸಾವಿರ ಕೋಟಿ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದೆ.
ಹಣ ವರ್ಗಾವಣೆ ತನಿಖೆ ಮಾಡ್ತಿದೆ ಇಡಿ
ಅನಿಲ್ ಅಂಬಾನಿ ಅವರ ಕಂಪನಿಗಳ ವಿರುದ್ಧದ ಹಣ ವರ್ಗಾವಣೆ ತನಿಖೆಯನ್ನ ಇಡಿ ಮಾಡುತ್ತಿದ್ದು, ಈ ತನಿಖೆಯ ಭಾಗವಾಗಿಯೇ ಅವರಿಗೆ ಸಂಬಂಧಪಟ್ಟ 3 ಸಾವಿರಕ್ಕೂ ಹೆಚ್ಚು ಕೋಟಿ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗಿದೆ. ಅಂಬಾನಿ ಅವರ ಮುಂಬೈನ ಪಾಲಿ ಹಿಲ್‌ನಲ್ಲಿರುವ ಮನೆ ಸೇರಿದಂತೆ ಅವರ ಗ್ರೂಪ್ ಕಂಪನಿಗಳ ಇತರ ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಬೇಕಾದ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಾಲ್ಕು ತಾತ್ಕಾಲಿಕ ಆದೇಶಗಳನ್ನ ಇಡಿ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಸಿಬಿಐ ಶಾಕ್.. ವಂಚಕ ಉದ್ಯಮಿ ಎಂದು ಘೋಷಿಸಿದ ಬ್ಯಾಂಕ್!
ಮಾಹಿತಿಗ:ಳ ಪ್ರಕಾರ, ಅವರ ದೆಹಲಿಯ ಮಹಾರಾಜ ರಂಜಿತ್ ಸಿಂಗ್ ರಸ್ತೆಯಲ್ಲಿ ಇರುವ ರಿಲಯನ್ಸ್ ಸೆಂಟರ್‌ಗೆ ಸೇರಿದ ಭೂಮಿ ಮತ್ತು ನೋಯ್ಡಾ, ಗಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ ಹೀಗೆ ಅನೇಕ ಇತರ ಪ್ರದೇಶಗಳಲ್ಲಿ ಇರುವ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿದೆ.
ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 3,084 ಕೋಟಿ ರೂ ಎಂದು ಅಂದಾಜು ಮಾಡಿದ್ದು, ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ ಸಂಗ್ರಹಿಸಿದ ಸಾರ್ವಜನಿಕ ನಿಧಿಯ ಹಣದ ವಿಚಾರದಲ್ಲಿ ಅಕ್ರಮ ಆಗಿದೆ ಎಂದು ಆರೋಪ ಬಂದಿದ್ದು, ಅದರ ತನಿಖೆ ಮಾಡಲಾಗುತ್ತಿದೆ.
ಅನಿಲ್ ಅಂಬಾನಿ ವಿರುದ್ದ ಸಿಬಿಐ ಚಾರ್ಜ್‌ಶೀಟ್
ಕೆಲ ಸಮಯದ ಹಿಂದೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಅನಿಲ್ ಅಂಬಾನಿ ಅವರ ಸಮೂಹ ಕಂಪನಿಗಳ ವಿರುದ್ಧ ದೊಡ್ಡ ಕ್ರಮ ಕೈಗೊಂಡಿತ್ತು. ಅನಿಲ್ ಅಂಬಾನಿ ಸಮೂಹ ಕಂಪನಿಗಳು ಮತ್ತು ಯೆಸ್ ಬ್ಯಾಂಕ್ ನಡುವಿನ ವಂಚನೆ ವಹಿವಾಟುಗಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಳಗೊಂಡ 2,929 ಕೋಟಿ ರೂ. ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ ವಿರುದ್ಧ ಇಡಿ ಕೂಡ ಪ್ರಕರಣವನ್ನು ದಾಖಲಿಸಿದೆ.
ಸಿಬಿಐ ರಾಣಾ ಕಪೂರ್, ಅನಿಲ್ ಅಂಬಾನಿ, ಬಿಂದು ಕಪೂರ್, ರಾಧಾ ಕಪೂರ್, ರೋಶ್ನಿ ಕಪೂರ್, ಆರ್‌ಸಿಎಫ್‌ಎಲ್, ಆರ್‌ಎಚ್‌ಎಫ್‌ಎಲ್ (ಈಗ ಆಟಮ್ ಇನ್ವೆಸ್ಟ್‌ಮೆಂಟ್ & ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್), ಆರ್‌ಎಬಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ಎಸ್ಟೇಟ್ ಪ್ರೈವೇಟ್ ಲಿಮಿಟೆಡ್, ಬ್ಲಿಸ್ ಹೌಸ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ಹ್ಯಾಬಿಟ್ಯಾಟ್ ಪ್ರೈವೇಟ್ ಲಿಮಿಟೆಡ್, ಇಮ್ಯಾಜಿನ್ ರೆಸಿಡೆನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಮಾರ್ಗನ್ ಕ್ರೆಡಿಟ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಇತರರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.