ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯರಿಗೆ ಚುನಾವಣಾಧಿಕಾರಿಗಳು ಭಾನುವಾರ ಬಿಸಿ ಮುಟ್ಟಿಸಿದ್ದಾರೆ.
ನೀತಿ ಸಂಹಿತೆ ಜಾರಿಗೊಂಡಿದ್ದರೂ, ರೇಣುಕಾಚಾರ್ಯ ಅವರು ಚುನಾವಣಾಧಿಕಾರಿಗಳ ಅನುಮತಿಯಿಲ್ಲದೆ ಭಾನುವಾರ ಬೆಂಗಳೂರಿನ ಗುರುರಾಜ ಕಲ್ಯಾಣಮಂಟಪದಲ್ಲಿ ಸಭೆ ನಡೆಸಿದ್ದಾರೆ.
ಇಂತಹ ಸಭೆ ನಡೆಸಲು ಚುನಾವಣಾ ಆಯೋಗ ಹಾಗೂ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆಯುವುದು ಅಗತ್ಯವಾಗಿದ್ದು, ಶಾಸಕರು ಅನುಮತಿ ಪಡೆಯದೆ ಸಭೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುರಾಜ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಅಧಿಕಾರಿಗಳು ಕಾರ್ಯಕ್ರಮ ನಿಲ್ಲಿಸಲು ಮುಂದಾಗಿದ್ದಾರೆ.
ಅಧಿಕಾರಿಗಳು ಭೇಟಿ ನೀಡಿದ ಬಳಿಕವೂ ರೇಣುಕಾಚಾರ್ಯ ತಮ್ಮ ಭಾಷಣ ಮುಂದುವರೆಸಿದ್ದು, ಅಧಿಕಾರಿಗಳು ಮೈಕ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ.
ಸರ್, ಇರಿ ಸ್ವಲ್ಪ ಇರಿ ಅಂತಾ ಹೇಳಿದ ರೇಣುಕಾಚಾರ್ಯ ಭಾಷಣ ಮುಂದುವರಿಸಿದ್ದಾರೆ. ಬಳಿಕ ನೆರೆದಿದ್ದ ಸಭಿಕರಿಗೂ ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಅಂತ ತಿಳಿದು ಕೊನೆಗೂ ಸಭೆಯನ್ನು ಮೊಟಕುಗೊಳಿಸಲಾಗಿದೆ. ಅದಾಗ್ಯೂ, ಸಭೆಯ ವೀಡಿಯೋ ಮಾಡಿರುವ ಚುನಾವಣಾಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ಕೇಸ್ ಹಾಕಲು ಸಿದ್ಧತೆ ನಡೆಸಿದ್ದಾರೆ