Monday, January 20, 2025
Homeರಾಜಕೀಯರೇವಣ್ಣ – ಡಿವೈಎಸ್‍ಪಿ ನಡುವಿನ ಜಟಾಪಟಿ ತಾರಕಕ್ಕೆ!

ರೇವಣ್ಣ – ಡಿವೈಎಸ್‍ಪಿ ನಡುವಿನ ಜಟಾಪಟಿ ತಾರಕಕ್ಕೆ!

ಹಾಸನ: ಚುನಾವಣೆಯ ಕಣ ದಿನದಿಂದ ದಿನಕ್ಕೆ ಆರೋಪ -ಪ್ರತ್ಯಾರೋಪಗಳ ವೇದಿಕೆಯಾಗುತ್ತಿದ್ದು, ಇದಕ್ಕೆ ಹಾಸನದ ಜೆಡಿಎಸ್ ಶಾಸಕ ರೇವಣ್ಣ ಮತ್ತು ಡಿವೈಎಸ್‍ಪಿ ಉದಯಭಾಸ್ಕರ್ ನಡುವಿನ ಜಟಾಪಟಿ ಸೇರ್ಪಡೆಯಾಗಿದೆ. ರಾಜಕಾರಣಿಗಳ ಆರೋಪದಿಂದಾಗಿ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಮುಗಿಯುವವರೆಗೂ ದಯವಿಟ್ಟು ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಿ ಎಂದು ಡಿವೈಎಸ್‍ಪಿ ಉದಯಭಾಸ್ಕರ್ ಪತ್ರ ಬರೆದಿದ್ದಾರೆ.
ಈ ಮುನ್ನ ರೇವಣ್ಣ, ಉದಯಭಾಸ್ಕರ್ ವಿರುದ್ಧ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರು. ಡಿವೈಎಸ್‍ಪಿ ವಿರುದ್ದ ರೇವಣ್ಣ ಏಕವಚನದಲ್ಲಿ ಹರಿಹಾಯುವ ದೃಶ್ಯಾವಳಿಗಳೂ ಸಹ ಮಾಧ್ಯಮಗಳಲ್ಲಿ ಬಿತ್ತರಗೊಂಡಿತ್ತು. ಉದಯ ಭಾಸ್ಕರ್ ಏಕಪಕ್ಷೀಯವಾಗಿದ್ದಾರೆ ಎಂದು ರೇವಣ್ಣ ಬಹಿರಂಗವಾಗಿಯೇ ಹಲವು ಬಾರಿ ಟೀಕಿಸಿದ್ದರು.
ಇದನ್ನು ತಮ್ಮ ಸಂಕ್ಷಿಪ್ತ ಪತ್ರದಲ್ಲಿ ಪರೋಕ್ಷವಾಗಿ ಉಲ್ಲೇಖಿಸಿರುವ ವಿಜಯಭಾಸ್ಕರ್, ನಾನು ನಿಷ್ಪಕ್ಷಪಾತ ಮತ್ತು ನೇರ ನಡೆಯುಳ್ಳವನಾಗಿದ್ದು ರಾಜಕಾರಣಿಗಳು ನನ್ನಿಂದ ಕಾನೂನುಬಾಹಿರ ಕ್ರಮಗಳನ್ನು ಅಪೇಕ್ಷಿಸುತ್ತಾರೆ. ನಾನು ಒಪ್ಪದಿದ್ದಾಗ ಆರೋಪಗಳನ್ನು ಮಾಡಿ ನಾನು ಮಾನಸಿಕವಾಗಿ ಒತ್ತಡಕ್ಕೊಳಗಾಗುವಂತೆ ಮಾಡುತ್ತಾರೆ. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಿದರೆ ನಾನು ಸುಗಮವಾಗಿ ಕೆಲಸ ಮಾಡಲು ಅಸಾಧ್ಯ. ಮತ್ತು ನನ್ನ ಮೇಲಧಿಕಾರಿಗಳಿಗೂ ಇರಿಸುಮುರಿಸುಂಟಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಮುನ್ನ ವಿಜಯಭಾಸ್ಕರ್ 2014 ರಲ್ಲಿ ಬೆಂಗಳೂರಿನಲ್ಲಿ ರಕ್ತಚಂದನ ಕಳ್ಳಸಾಗಣೆ ಪ್ರಕರಣದಲ್ಲಿ, ಲಕ್ಷಾಂತರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಮತ್ತು ಅಕ್ರಮವಾಗಿ ರಕ್ತಚಂದನ ಮತ್ತಿತರ ದುಬಾರಿ ವಸ್ತುಗಳನ್ನು ಕದ್ದೊಯ್ದ ಆರೋಪದಲ್ಲಿ ಕರ್ತವ್ಯದಿಂದ ವಜಾಗೊಂಡಿದ್ದರು.

ಡಿವೈಎಸ್‍ಪಿ ಉದಯಭಾಸ್ಕರ್ ತಮ್ಮ ಮೇಲಧಿಕಾರಿಗಳಿಗೆ ಬರೆದಿರುವ ಪತ್ರ

ಹೆಚ್ಚಿನ ಸುದ್ದಿ

error: Content is protected !!