ಪಣಜಿ: ಡಚ್ ಪ್ರವಾಸಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಇರಿದು ಸಹಾಯಕ್ಕೆ ಬಂದ ಮತ್ತೊಬ್ಬ ವ್ಯಕ್ತಿಗೂ ಇರಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಗೋವಾದ ಪರ್ನೆಮ್ ನ ರೆಸಾರ್ಟ್ ಒಂದರ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಅಭಿಷೇಕ್ ವರ್ಮಾ ಎಂದು ಗುರುತಿಸಲಾಗಿದೆ.
“ರೆಸಾರ್ಟ್ ಸಿಬ್ಬಂದಿ ಪ್ರವಾಸಿ ವಾಸವಿದ್ದ ಟೆಂಟ್ ನೊಳಗೆ ಅಕ್ರಮವಾಗಿ ನುಗ್ಗಿದ್ದಾನೆ. ಆಕೆ ಕೂಡಲೇ ಕಿರುಚಿದ್ದು, ಸ್ಥಳೀಯರೊಬ್ಬರು ನೆರವಿಗೆ ಧಾವಿಸಿದ್ದಾರೆ. ಕೂಡಲೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಮತ್ತೆ ಚೂರಿ ಹಿಡಿದುಕೊಂಡು ಹಿಂದಿರುಗಿದ ಆತ ಸ್ಥಳೀಯ ವ್ಯಕ್ತಿಗೆ ಇರಿದು, ಸಂತ್ರಸ್ತೆಯ ಮೇಲೂ ದಾಳಿ ನಡೆಸಿದ್ದಾನೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿ ನಡೆಸಲು ಬಳಸಿದ್ದ ಚೂರಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.