ಗಾಂಧೀನಗರ: ಪಾನಮತ್ತ ಯುವಕನೊಬ್ಬ ರಸ್ತೆಯಲ್ಲಿ ವೇಗವಾಗಿ ಕಾರು ಚಲಾಯಿಸಿ ನಾಲ್ವರ ಮೇಲೆ ಹರಿಸಿ ಭೀಕರ ಅಪಘಾತವಾದ ಬಳಿಕವೂ ಮತ್ತೊಂದು ರೌಡ್ ಎಂದು ಕೂಗಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆ ಗುರುವಾರ ರಾತ್ರಿ ಗುಜರಾತ್‌ನ ವಡೋದರಾದಲ್ಲಿ ನಡೆದಿದೆ. ಆರೋಪಿಯನ್ನು ಎಂಎಸ್ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿ ರಕ್ಷಿತ್ ರವೀಶ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ನಗರದ ಕರೇಲಿಬಾಗ್ ಪ್ರದೇಶದಲ್ಲಿ ಆತ ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಕಪ್ಪು ಬಣ್ಣದ ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರು ನಿಯಂತ್ರಣ ತಪ್ಪಿ ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿಯ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಜನರು ರಸ್ತೆಯಲ್ಲಿ ಚಲನರಹಿತವಾಗಿ ಬಿದ್ದಿರುವುದು ವೈರಲ್ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದೆ. ಪ್ರಸ್ತುತ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Driver hits 4 k!lls 1 in Gujarat.
pic.twitter.com/Q4afDcnwA3— Ghar Ke Kalesh (@gharkekalesh) March 14, 2025
ಅಪಘಾತವಾಗುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಜನರು ಆರೋಪಿ ಯುವಕನನ್ನು ಹಿಡಿದು ಬಳಿಕ ಪೊಲೀಸರಿಗೊಪ್ಪಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಇದು ಡ್ರಿಂಕ್ ಆಂಡ್ ಡ್ರೈವ್ ಕೇಸ್ ಎಂದು ದೃಢಪಡಿಸಿದ್ದಾರೆ.