ಮಧ್ಯಪ್ರದೇಶದ : ಇಲ್ಲಿನ ಛತ್ತರ್‌ಪುರ ಜಿಲ್ಲೆಯ ಬ್ಯಾರಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಂವಿಧಾನದ ವಾಸ್ತುಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ.ಹೀಗೆ ಪ್ರತಿಮೆ ಕಾಣೆಯಾದ ಎರಡು ದಿನಗಳ ನಂತರ ಪೊಲೀಸರು ಈ ಬಗ್ಗೆ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದಾರೆ.ಸುಮಾರು ಒಂದೂವರೆ ಅಡಿ ಎತ್ತರದ ಪ್ರತಿಮೆಯನ್ನು ಮಂಗಳವಾರ (ಮಾ.11) ಛತ್ತರ್‌ಪುರ ಜಿಲ್ಲೆಯ ಬ್ಯಾರಿ ಗ್ರಾಮದ ಬಯಲು ಜಾಗದಲ್ಲಿ ಪೀಠದ ಮೇಲೆ ಸ್ಥಾಪಿಸಲಾಗಿತ್ತು.ಆದ್ರೆ ಆ ನಂತರ ಅದು ನಾಪತ್ತೆಯಾಗಿದೆ.
ಜಿಲ್ಲಾ ಕೇಂದ್ರದಿಂದ 12 ಕಿ.ಮೀ ದೂರದಲ್ಲಿರುವ ಗರ್ಹಿ ಮಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾರಿ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಕಳ್ಳತನವಾಗಿರುವ ಬಗ್ಗೆ ನಮಗೆ ದೂರು ಬಂದಿತ್ತು. ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಿತಾ ದಾಗರ್ ತಿಳಿಸಿದ್ದಾರೆ.
ಬ್ಯಾರಿ ಗ್ರಾಮದ ಸರಪಂಚ್ ಆಶಾರಾಮ್ ಅಹಿರ್ವಾರ್ ಅವರ ಮುಖಾಂತರ ಸಂಪೂರ್ಣ ಗ್ರಾಮಸ್ಥರು ಕ್ರೌಡ್ ಫಂಡಿಂಗ್ ಮಾಡಿ ಉತ್ತರ ಪ್ರದೇಶದಿಂದ ಡಾ.ಅಂಬೇಡ್ಕರ್ ಅವರ ಈ ಪ್ರತಿಮೆಯನ್ನು ಖರೀದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಈ ಶಿಲಾಮೂರ್ತಿ 18 ಇಂಚು ಎತ್ತರವಿದ್ದು, ಎರಡು ದಿನಗಳ ಹಿಂದೆಯಷ್ಟೇ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿತ್ತು.ಈ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದ್ದು,ಕಳ್ಳತನಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.