ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸ್ಪರ್ಧಿಸಲಿರುವ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಕೋಲಾರದಲ್ಲಿ ಜೆಡಿಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿಖಿಲ್ ʼಸಿದ್ದರಾಮಯ್ಯ ಅವರನ್ನು ಹರಕೆ ಕುರಿ ಮಾಡಬೇಡಿʼ ಎಂದು ಕೈ ಮುಖಂಡರಿಗೆ ಮನವಿ ಮಾಡಿದ್ದಾರೆ.
“ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ದಿಕ್ಕು ತಪ್ಪಿಸಿ ಕೋಲಾರದಿಂದ ಸ್ಪರ್ಧಿಸುವಂತೆ ಪ್ರಯತ್ನ ಮಾಡಿದ್ದರು. ಒಬ್ಬ ಯುವಕನಾಗಿ ಅವರಿಗೆ (ಸಿದ್ದರಾಮಯ್ಯರಿಗೆ) ಹಿತ ಬಯಸುತ್ತೇನೆ, ಸಿದ್ದರಾಮಯ್ಯ ಅವರನ್ನು ಹರಕೆಯ ಕುರಿ ಮಾಡಬೇಡಿ ಎಂದು ನಾನು ಕಾಂಗ್ರೆಸ್ ನಾಯಕರಿಗೆ ಹೇಳುತ್ತೇನೆ.” ಎಂದು ನಿಖಿಲ್ ಹೇಳಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ವಿಚಾರವಾಗಿ ಸಾಕಷ್ಟು ಗೊಂದಲಗಳಿದ್ದು, ಸ್ಥಳೀಯ ಮುಖಂಡರು ಹಾಗೂ ಕೋಲಾರದ ಅಭಿಮಾನಿಗಳು ಸಿದ್ದರಾಮಯ್ಯ ಕೋಲಾರದಿಂದಲೇ ಸ್ಪರ್ಧಿಸಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಆದರೆ, ಕೋಲಾರದಲ್ಲಿ ಸಿದ್ದರಾಮಯ್ಯ ಪರವಾದ ವಾತಾವರಣ ಇಲ್ಲವೆಂದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಬಳಿ ಬೇರೆ ಕ್ಷೇತ್ರ ಆಯ್ಕೆ ಮಾಡುವಂತೆ ಸೂಚಿಸಿದ್ದಾರೆ.