ಮೂಲ ಕಾರ್ಯಕರ್ತ vs ವಲಸಿಗ ಬಿಸಿ ಈಗ ಕಾಂಗ್ರೆಸಿಗೂ ತಟ್ಟಿದೆ. ಚಿಕ್ಕಮಗಳೂರಿನಲ್ಲಿ ಸಿಟಿ ರವಿಗೆ ಪೈಪೋಟಿ ನೀಡಲೆಂದು ಬಿಜೆಪಿಯಿಂದ ಕಾಂಗ್ರೆಸಿಗೆ ಆಮದು ಮಾಡಿಕೊಂಡಿದ್ದ ತಮ್ಮಯ್ಯರಿಗೆ ಟಿಕೆಟ್ ನೀಡಬಾರದೆಂಬ ಕೂಗು ಕಾಂಗ್ರೆಸ್ ಕಾರ್ಯಕರ್ತರ ನಡುವಿನಿಂದ ಕೇಳಿಬಂದಿದೆ.
ಆ ಮೂಲಕ, ಸಿಟಿ ರವಿ ನಾಗಾಲೋಟಕ್ಕೆ ಬ್ರೇಕ್ ಹಾಕುವ ಕಾಂಗ್ರೆಸ್ ರಾಜ್ಯ ನಾಯಕತ್ವಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ವಲಸಿಗರಿಗೆ ಟಿಕೆಟ್ ನೀಡಬಾರದೆಂಬ ಕೂಗು ಇದೀಗ ಹೈಕಮಾಂಡ್ಗೆ ತಲುಪಿದೆ.
ಚಿಕ್ಕಮಗಳೂರಿನಲ್ಲಿ ಮೂಲ ಕಾಂಗ್ರೆಸ್ ಹಾಗೂ ವಲಸೆ ಕಾಂಗ್ರೆಸಿಗರ ನಡುವೆ ಟಿಕೆಟ್ಗಾಗಿ ಪೈಪೋಟಿ ತೀವ್ರಗೊಂಡಿದೆ. ಒಂದು ಕಾಲದಲ್ಲಿ ಸಿಟಿ ರವಿ ಅವರ ಆಪ್ತರಾಗಿದ್ದ ತಮ್ಮಯ್ಯ ಇತ್ತೀಚೆಗೆ ಕಾಂಗ್ರೆಸ್ ಸೇರಿ, ರವಿ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿದ್ದರು. ಸಿಟಿ ರವಿ ವಿರುದ್ಧ ತಮ್ಮಯ್ಯರಿಗೆ ಬಹುತೇಕ ಟಿಕೆಟ್ ನೀಡುವುದು ಖಚಿತವೂ ಆಗಿತ್ತು. ಆದರೆ, ಎರಡನೇ ಪಟ್ಟಿ ಬಿಡುಗಡೆ ಹೊತ್ತಲ್ಲಿ ಭಿನ್ನಮತದ ದನಿ ಜೋರಾಗಿ ಕೇಳತೊಡಗಿದೆ.
ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರ ವಿನ ಕಿತ್ತಾಟ ಶಮನಕ್ಕೆ ಕೈ ಟಿಕೆಟ್ ಆಕಾಂಕ್ಷಿಗಳ ಸಭೆ ಕರೆದಿದ್ದು, ಸಭೆಗೆ ಬಂದಿದ್ದ 6 ಆಕಾಂಕ್ಷಿಗಳೂ ರಾಜಿನಾಮೆ ಬೆದರಿಕೆ ಹಾಕಿದ್ದಾರೆ. ವಲಸಿಗರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂಬ ಪಟ್ಟು ಹಿಡಿದಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಉಂಟಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ವಿರುದ್ಧ ಕಿಡಿ ಕಾರಲಾಗುತ್ತಿದೆ. ಸಭೆಯಲ್ಲಿ ಮುಖಂಡರು, ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ನೂಕಾಟ ತಳ್ಳಾಟ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಚಿಕ್ಕಮಗಳೂರಿನಲ್ಲಿ ನಿರ್ಣಾಯಕ ಲಿಂಗಾಯತ ಮತವನ್ನು ತಮ್ಮಯ್ಯ ಕಸಿದುಕೊಳ್ಳುವ ಸಾಧ್ಯತೆ ಇದ್ದಿದ್ದರಿಂದ ಸಿಟಿ ರವಿ ವಿರುದ್ಧ ತಮ್ಮಯ್ಯ ಅಖಾಡಕ್ಕೆ ಬರುತ್ತಿದ್ದಂತೆ ಚಿಕ್ಕಮಗಳೂರು ಕ್ಷೇತ್ರ ಹೈ ವೋಲ್ಟೇಜ್ ಕಣವಾಗುವ ಸಾಧ್ಯತೆ ದಟ್ಟವಾಗಿತ್ತು. ಆದರೆ, ಮೂಲ ಕಾಂಗ್ರೆಸಿಗರು ವಲಸಿಗರಿಗೆ ಟಿಕೆಟ್ ನೀಡಬಾರದೆಂದು ಪಟ್ಟು ಹಿಡಿದು ಕೂತಿದ್ದಾರೆ.